ಕೋಲ್ಕತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಜುಲೈ 8 ರಂದು ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಮೇಲೆ ಟಿಎಂಸಿ ಕಾರ್ಯಕರ್ತರು ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯನ್ನು ವಿವರಿಸುತ್ತಿರುವಾಗ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಕಣ್ಣೀರು ಸುರಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ, ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳನ್ನು ಉಲ್ಲೇಖಿಸಿದ ಲಾಕೆಟ್ ಚಟರ್ಜಿ, “ನಾವೂ ಮಹಿಳೆಯರು. ನಮ್ಮ ಹೆಣ್ಣು ಮಕ್ಕಳನ್ನು ಉಳಿಸಬೇಕು. ನಾವೂ ದೇಶದ ಹೆಣ್ಣುಮಕ್ಕಳು. ಪಶ್ಚಿಮ ಬಂಗಾಳವು ದೇಶದ ಒಂದು ಭಾಗವಾಗಿದೆ. ಮಣಿಪುರ ಘಟನೆಯನ್ನು ಪ್ರಧಾನಿ ಮೋದಿ ನಿನ್ನೆ ಖಂಡಿಸಿದ್ದರು. ಕಾನೂನು ಸುವ್ಯವಸ್ಥೆ ಪ್ರತಿ ರಾಜ್ಯದಲ್ಲೂ ಮಹಿಳೆಯರ ಸುರಕ್ಷತೆಗಾಗಿ ಕೆಲಸ ಮಾಡಬೇಕು. ನಮ್ಮ ಪ್ರದೇಶದ ಹೆಣ್ಣುಮಕ್ಕಳ ಬಗ್ಗೆಯೂ ಮಾತನಾಡಬೇಕೆಂದು ನಾವು ಬಯಸುತ್ತೇವೆ ಎಂದು ಒತ್ತಾಯಿಸಿದರು.
ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರವಾಗಿ ಮೆರವಣಿಗೆ ಮಾಡಿದ ಭಯಾನಕ ವಿಡಿಯೋ ವೈರಲ್ ಬೆನ್ನಲ್ಲೇ ಬಿಜೆಪಿ ಸಂಸದೆ, ಪಂಚಾಯತ್ ಚುನಾವಣೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿಯೂ ನಡೆದ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಕಣ್ಣೀರಿಟ್ಟು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ, ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಮಾತನಾಡಿ “ದಕ್ಷಿಣ ಪಂಚ್ಲಾದಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತೆಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ, ಇದು ಮಣಿಪುರ ಘಟನೆಗಿಂತ ಕಡಿಮೆಯೇ? ವ್ಯತ್ಯಾಸವೆಂದರೆ ಈ ಘಟನೆಯ ಯಾವುದೇ ವಿಡಿಯೋ ಇಲ್ಲ. ಏಕೆಂದರೆ ಮಮತಾ ಬ್ಯಾನರ್ಜಿ ಅವರ ಪೊಲೀಸರು ಅದನ್ನು ರೆಕಾರ್ಡ್ ಮಾಡಲು ಅನುಮತಿಸುವುದಿಲ್ಲ” ಎಂದು ಆರೋಪಿಸಿದ್ದಾರೆ.