ಹಾಸನ: ನಾನು ದೇವರ ಸನ್ನಿಧಾನದಿಂದ ಬಂದಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ, ಚನ್ನಕೇಶವ ದೇವರ ಆಶೀರ್ವಾದದಿಂದ ನಾನು ಹಾಸನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ಆದರೆ ಈ ಬಾರಿ ನಾನು ಸ್ಪರ್ಧಿಸುತ್ತಿಲ್ಲ, ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದು, ನೀವು ಆತನನ್ನು ಗೆಲ್ಲಿಸಬೇಕು ಎಂದು ಹೇಳಿದ ಜೆಡಿಎಸ್ ವರಿಷ್ಠ ವೇದಿಕೆಯಲ್ಲೇ ಭಾವುಕರಾಗಿ ಕಣ್ಣೀರು ಹಾಕಿದರು. ಈ ಘಟನೆ ಬಗ್ಗೆ ಭಾರತೀಯ ಜನತಾ ಪಕ್ಷ ಟ್ವೀಟ್ ಮೂಲಕ ತೀಕ್ಷ್ಣವಾಗಿ ತಿರುಗೇಟು ನೀಡಿದೆ.
ಬುಧವಾರ ಹೊಳೆನರಸೀಪುರದ ಮೂಡಲಹಿಪ್ಪೆ ಗ್ರಾಮದಲ್ಲಿ ಚನ್ನಕೇಶವ ದೇವಾಲಯದಲ್ಲಿ ಪುತ್ರ ರೇವಣ್ಣ, ಸೊಸೆ ಭವಾನಿ ರೇವಣ್ಣ, ಮೊಮ್ಮಗ ಪ್ರಜ್ವಲ ರೇವಣ್ಣ ಜೊತೆಗೂಡಿ ಪೂಜೆ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಕಣ್ಣೀರಿನ ಪ್ರಸಂಗ ನಡೆಯಿತು.
ತಮ್ಮ ಕ್ಷೇತ್ರ ಹಾಗೂ ಮೊಮ್ಮಗನ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡರು, ನನ್ನ ಬಗ್ಗೆ ಕುಟುಂಬ ರಾಜಕಾರಣದ ಆರೋಪ ಹೊರಿಸುತ್ತಾರೆ. ಜಾತಿ ರಾಜಕೀಯ ಮಾಡುತ್ತಾರೆ ಅಂತ ದೂರುತ್ತಾರೆ. ಪಕ್ಷ ಉಳಿಸಿಕೊಳ್ಳಲು ಕೆಲವು ಬಾರಿ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಆದರೆ ನಾನು ಯಾರಿಗೆ ಮೋಸ ಮಾಡಿದ್ದೇನೆ ನೀವೆ ಹೇಳಿ ಎಂದು ಗದ್ಗದಿತರಾಗಿದ್ದರು. ಈ ವೇಳೆ ವೇದಿಕೆ ಮೇಲಿದ್ದ ಪ್ರಜ್ವಲ್ ರೇವಣ್ಣ ಕೂಡಾ ಕಣ್ಣೀರು ಹಾಕಿದರು.
ಇದಕ್ಕೂ ಮುನ್ನ ಇದು ತನ್ನ ಕೊನೆಯ ಚುನಾವಣೆ ಎಂದು ದೇವೇಗೌಡರು ಕಣ್ಣೀರು ಹಾಕಿದ್ದನ್ನು ನೆನಪಿಸಿಕೊಂಡು ಶ್ರವಣಬೆಳಗೊಳ ಜೆಡಿಎಸ್ ಶಾಸಕ ಬಾಲಕೃಷ್ಣ ಅವರು ಗೋಳೋ ಎಂದು ಅತ್ತುಬಿಟ್ಟಿದ್ದರು. ಈ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಕೂಡಾ ಕಣ್ಣೀರು ಹಾಕಿದ್ದ ಪ್ರಸಂಗ ನಡೆದಿತ್ತು.
ಯೋಧರು ಸಾವನ್ನಪ್ಪಿದಾಗ ಕಣ್ಣೀರು ಹಾಕಿಲ್ಲ! ಬಿಜೆಪಿ ವ್ಯಂಗ್ಯ
ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ, ಪುಲ್ವಾಮಾ ದಾಳಿಯಾಗಿ ಯೋಧರು ಮಡಿದಾಗ ಕಣ್ಣೀರು ಬರಲಿಲ್ಲ, ಚುನಾವಣೆ ಬಂದಾಗ ಮಾತ್ರ ಮನೆ ಮಂದಿಗೆಲ್ಲ ವೇದಿಕೆಯಲ್ಲಿ ಕಣ್ಣೀರು! ರಾಜ್ಯದ ಜನರು ಈಗಲೂ ಮರುಳಾಗುವರೇ? ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿ ಕಟುವಾಗಿ ಟೀಕಿಸಿದೆ.