ಬಳ್ಳಾರಿ: ರಾಜ್ಯದಲ್ಲಿ ಅಧಿ ಕಾರಕ್ಕೆ ಬರಲು ಹಾತೊರೆಯುತ್ತಿರುವ ಬಿಜೆಪಿ, ಬೇರೆ ಪಕ್ಷಗಳ ಶಾಸಕರ ಖರೀದಿಗಾಗಿ ಒಂದು ಸಾವಿರ ಕೋಟಿ ರೂ.ಮೀಸಲಿಟ್ಟಿದೆ ಎಂದು ಮಾಜಿ ಶಾಸಕ ಅನಿಲ್‌ಲಾಡ್ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿ ಸರಕಾರ ಉರುಳಿಸಲು ಯತ್ನಿಸುತ್ತಿದೆ. ಈಗ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಒಂದು ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಆರೋಪಿಸಿದರು.
ಬಿಜೆಪಿಯವರು ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲ ಶಾಸಕರನ್ನು ಮುಂಬೈನಲ್ಲಿ ಇಟ್ಟಿದ್ದಾರೆ. ಶಾಸಕರನ್ನು ಕರೆ ತರಲು ಮುಂಬೈಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಹೋಟೆಲ್ ಒಳಗೆ ಹೋಗಲು ಅಲ್ಲಿನ ಸರ್ಕಾರ ಬಿಡಲಿಲ್ಲ. ರಾಜ್ಯದಲ್ಲಿ ಉಂಟಾಗುತ್ತಿರುವ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಅಸಹ್ಯವಾಗುತ್ತಿದ್ದು, ಇದಕ್ಕೆಲ್ಲ ಬಿಜೆಪಿಯೇ ಕಾರಣ ಎಂದರು.
“ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿ ಸಭೆಗೆ ಗೈರಾಗಿದ್ದು, ಅವರ ಬಗ್ಗೆ ನಾನು ಮಾತನಾಡಲ್ಲ. ಅವರನ್ನು ನಾನು ಸಂಪರ್ಕಿಸಿಯೂ ಇಲ್ಲ’ ಎಂದರು. ಎಲ್ಲ ಕ್ಷೇತ್ರದಲ್ಲೂ ಒಳ್ಳೆಯವರು, ಕೆಟ್ಟವರಿದ್ದಾರೆ. ನಮ್ಮ ಪಕ್ಷದ ಕೆಲವರು ಇಂದು ಬಿಜೆಪಿಗೆ ಹೋಗಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಹಣ ಕೊಟ್ಟಿದ್ದಾರೆಂಬ ಆರೋಪ ಇದೆ. ಆದರೆ, ಬಿಜೆಪಿ ಹೋರಾಟ ಒಂದೇ ದಿನಕ್ಕೆ ಸೀಮಿತವಾಗಿದೆ. ರಾಜ್ಯಪಾಲರ ನಡೆ, ಆ ಹುದ್ದೆಗೆ ಗೌರವ ತಂದು ಕೊಡುವಂಥದ್ದಲ್ಲ. ಬಿಜೆಪಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಟೀಕಿಸಿದರು.