Advertisement
ಈ ಬಾರಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ವರಿಷ್ಠರು ರಾಜ್ಯ ಬಿಜೆಪಿ ನಾಯಕರ ಚಟುವಟಿಕೆ, ಕಾರ್ಯ ವೈಖರಿಯ ಮೇಲೆ ನಿಗಾ ವಹಿಸಿದಂತಿದ್ದು, ವರಿಷ್ಠರ ಸೂಚನೆಯೆಂತೆಯೇ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸರ್ಕಾರ ರಚನೆ ಹಾಗೂ ಸ್ಪೀಕರ್ ಸ್ಥಾನದ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ವರಿಷ್ಠರ ನಡೆ ಕುತೂಹಲ ಮೂಡಿಸಿದೆ. ಮುಂದಿನ ವಾರ ಅಂತಿಮವಾಗಲಿದೆ ಎನ್ನಲಾಗಿರುವ 20 ಸಚಿವರ ಪಟ್ಟಿಯೂ ವರಿಷ್ಠರ ‘ಕಣ್ಗಾವಲಿ’ನಲ್ಲೇ ಅಂತಿಮವಾಗುವ ಸಾಧ್ಯತೆ ಇದ್ದು, ಲಾಬಿಯಲ್ಲಿ ನಿರತರಾಗಿರುವ ಸಚಿವಾಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದಂತಿದೆ.
Related Articles
Advertisement
ಸಂಪುಟ ರಚನೆ ವಿಳಂಬ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೂ ವರಿಷ್ಠರ ಒಪ್ಪಿಗೆ ಪಡೆದೇ ಸಂಪುಟ ರಚನೆಯಾಗಬೇಕಿದೆ. ಸಂಸತ್ ಅಧಿವೇಶನವು ಆ.7ರವರೆಗೆ ಮುಂದುವರಿಯಲಿದ್ದು, ಕೇಂದ್ರ ಸಚಿವರೆಲ್ಲಾ ಕಲಾಪದಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಸಂಪುಟ ರಚನೆ ಇನ್ನೂ ಒಂದು ವಾರ ಕಾಲ ವಿಳಂಬವಾಗುವ ಸಾಧ್ಯತೆ ಇದೆ.
ಆ. 5, 6ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಸಚಿವರ ಪಟ್ಟಿಗೆ ಅಂಗೀಕಾರ ಪಡೆಯಬೇಕಿದೆ. ಈಗಾಗಲೇ ಸರ್ಕಾರ ರಚನೆ ಸಂದರ್ಭ ಹಾಗೂ ಸ್ಪೀಕರ್ ಅಭ್ಯರ್ಥಿ ಬದಲಾವಣೆಯಲ್ಲಿ ವರಿಷ್ಠರ ನಡೆ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದೆ. 29 ಮಾಜಿ ಸಚಿವರು ಸದ್ಯ ಶಾಸಕರಾಗಿದ್ದು, ಮೂರಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದವರ ಸಂಖ್ಯೆ 50ಕ್ಕಿಂತಲೂ ಹೆಚ್ಚು ಇದೆ. ಈ ಪೈಕಿ ಬಹುತೇಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಆದರೆ ಬದಲಾದ ರಾಜಕೀಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಪಕ್ಷದ ವರ್ಚಸ್ಸು ವೃದ್ಧಿಸುವ ನಿಟ್ಟಿನಲ್ಲಿ ದಕ್ಷ ಆಡಳಿತ ನೀಡಬೇಕಿದೆ. ಆ ಹಿನ್ನೆಲೆಯಲ್ಲಿ ವರಿಷ್ಠರು ಸಂಪುಟ ಸಚಿವರ ಆಯ್ಕೆಯತ್ತಲೂ ಗಮನ ಹರಿಸಬಹುದು. ಆಗ ಕಳಂಕದ ಹಿನ್ನೆಲೆ, ಭ್ರಷ್ಟಾಚಾರ ಸೇರಿದಂತೆ ನಾನಾ ಆರೋಪ ಹೊತ್ತವರಿಗೂ ಅವಕಾಶ ಕೈತಪ್ಪಿದರೆ ಅಚ್ಚರಿಯಿಲ್ಲ ಎನ್ನಲಾಗಿದೆ.
– ಎಂ. ಕೀರ್ತಿಪ್ರಸಾದ್