Advertisement

CCB Police ಉದ್ಯಮಿಗೆ ವಂಚಿಸಿದ ಪ್ರಕರಣ:ಚೈತ್ರಾ ಸಹಿತ 8 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

10:14 PM Nov 08, 2023 | Team Udayavani |

ಬೆಂಗಳೂರು: “ಹೊಟೇಲ್‌ ಉದ್ಯಮಿ ಗೋವಿಂದಬಾಬು ಪೂಜಾರಿ ಬಿಜೆಪಿಯಿಂದ ಟಿಕೆಟ್‌ಗಾಗಿ ದುಂಬಾಲು ಬಿದ್ದರಿಂದ ಗಗನ್‌ ಕಡೂರು ಹಾಗೂ ತಾನು(ಚೈತ್ರಾ) ಸೇರಿಯೇ ಟಿಕೆಟ್‌ ಕೊಡಿಸುವುದಾಗಿ ಕೋಟ್ಯಂತರ ರೂ. ಪಡೆದೆವು. ಆದರೆ. ಟಿಕೆಟ್‌ ಕೊಡಿಸಲು ಸಾಧ್ಯವಾಗಿಲ್ಲ. ಹಣ ವಾಪಸ್‌ ಕೊಡಲೂ ಆಗಲಿಲ್ಲ’

Advertisement

ಹೀಗೆಂದು, ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ಉಡುಪಿ ಮೂಲದ ಉದ್ಯಮಿ ಗೋವಿಂದಬಾಬು ಪೂಜಾರಿಯಿಂದ 5 ಕೋಟಿ ರೂ. ಪಡೆದು ವಂಚಿಸಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ, ಗಗನ್‌ ಕಡೂರು ಹಾಗೂ ಅವರ ತಂಡದ ವಿರುದ್ಧ ಸಿಸಿಬಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಸಿಬಿ ಪೊಲೀಸರು ಪ್ರಕರಣದ ಎಂಟು ಮಂದಿ ವಿರುದ್ಧ 75 ಸಾಕ್ಷಿದಾರರ ಹೇಳಿಕೆ, ಡಿಜಿಟಲ್ , ಪ್ರಾಥಮಿಕ‌, ಸಾಂದರ್ಭಿಕ ಸಾಕ್ಷ್ಯಗಳು ಒಳಗೊಂಡಂತೆ 800 ಪುಟಗಳ ಸುದೀರ್ಘ ಆರೋಪಪಟ್ಟಿಯನ್ನು 3ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ತನಿಖೆ ವೇಳೆ ದೂರುದಾರ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ ಪಡೆಯಲಾಗಿದ್ದ ಆರೋಪಿಗಳ ಜತೆಗಿನ ಮೊಬೈಲ್‌ ಸಂಭಾಷಣೆಯ ಆಡಿಯೋ ತುಣುಕು, ಕಚೇರಿಯಲ್ಲಿನ ಸಿಸಿ ಕೆಮರಾ ದೃಶ್ಯಾವಳಿಗಳು, ಆರೋಪಿಗಳ ಮೊಬೈಲ್‌ ಚಾಟಿಂಗ್‌, ಮೊಬೈಲ್‌ ಕರೆಗಳ ಸಿಡಿಆರ್‌, ಡೇಟಾ ರಿಟ್ರೈವ್‌ ವರದಿಯನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ಕಿಂಗ್‌ಪಿನ್‌ಗಳಾದ ಚೈತ್ರಾ, ಗಗನ್‌ ಕಡೂರು ಹಾಗೂ ಇತರ ಆರೋಪಿಗಳು ವಂಚನೆ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ತನಿಖಾಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Advertisement

ದೊಡ್ಡವರಿಲ್ಲ
ಚೈತ್ರಾ ಬಂಧನದ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳಿ ಪ್ರಕರಣಕ್ಕೆ ತಿರುವು ನೀಡಿದ್ದಳು.ಆದರೆ, ಸಿಸಿಬಿ ಪೊಲೀಸರ ತನಿಖೆ ವೇಳೆ ಇಡೀ ಪ್ರಕರಣದಲ್ಲಿ ಚೈತ್ರಾ ಮತ್ತು ಗಗನ್‌ ಸೂತ್ರಧಾರಿಗಳು ಎಂಬುದು ಗೊತ್ತಾಗಿದೆ. ಉದ್ಯಮಿ ಗೋವಿಂದಬಾಬು ಪೂಜಾರಿ ಬಳಿ ತನಗೆ ಕೇಂದ್ರ ಬಿಜೆಪಿ ನಾಯಕರು, ಆರೆಸ್ಸೆಸ್‌ ಮುಖಂಡರು ಪರಿಚಯವಿದ್ದಾರೆ. ನಿಮಗೆ ಸುಲಭವಾಗಿ ಟಿಕೆಟ್‌ ಕೊಡಿಸುವೆ ಎಂದು 5 ಕೋಟಿ ರೂ. ಪಡೆದಿದ್ದಳು. ಚೈತ್ರಾಳ ಸೂಚನೆಯಂತೆ ಉಳಿದ ಆರೋಪಿಗಳು ಪಾತ್ರ ನಿರ್ವಹಿಸಿದ್ದಾರೆ. ಬೇರೆ ಯಾವ ದೊಡ್ಡವರು ಇಲ್ಲ ಎಂದು ಆಕೆಯೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಹಾಲಶ್ರೀ ಸ್ವಾಮೀಜಿಗೆ ಜಾಮೀನು
ಉದ್ಯಮಿಗೆ ವಂಚಿಸಿದ ಪ್ರಕರಣದ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ಹಾಲಶ್ರೀ ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯ ಪುರಸ್ಕರಿಸಿದ ನ್ಯಾ| ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಏನಿದು ಪ್ರಕರಣ?
ಹಿಂದೂ ಕಾರ್ಯಕರ್ತೆ ಚೈತ್ರಾ ಹಾಗೂ ಆಕೆಯ ಗ್ಯಾಂಗ್‌ ಕಳೆದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉಡುಪಿ ಮೂಲದ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ 5 ಕೋಟಿ ರೂ. ಪಡೆದು ವಂಚಿಸಿತ್ತು. ಈ ಸಂಬಂಧ ಗೋವಿಂದಬಾಬು ಪೂಜಾರಿ ಬಂಡೆಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಚೈತ್ರಾ, ವಿಜಯನಗರ ಜಿಲ್ಲೆ ಹಿರೇಹಡಗಲಿ ಅಭಿನವ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ, ಶ್ರೀಕಾಂತ್‌ ನಾಯಕ್‌, ಗಗನ್‌ ಕಡೂರು, ಧನರಾಜ್‌, ರಮೇಶ್‌, ಪ್ರಸಾದ್‌, ಪ್ರಜ್ವಲ್‌ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ನಗದು, ಚಿನ್ನಾಭರಣ, ಕಾರು ಸೇರಿ 4.11 ಕೋಟಿ ರೂ.ಜಪ್ತಿ ಮಾಡಿದ್ದರು.

ಪ್ರಮುಖವಾಗಿ ಉಡುಪಿಯ ಸಹಕಾರ ಸಂಘದ ಲಾಕರ್‌ನಲ್ಲಿದ್ದ ಆಸ್ತಿ ಪತ್ರ, 1.8 ಕೋಟಿ ರೂ. ಎಫ್‌.ಡಿ, 40 ಲಕ್ಷ ರೂ. ನಗದು, 65 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಪತ್ತೆಯಾಗಿತ್ತು. ಶ್ರೀಕಾಂತ್‌ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಹಣ, ಚಿನ್ನ ಇಟ್ಟಿದ್ದರು. ಉಡುಪಿಯ ಹಿರಿಯಡ್ಕದ ಎರಡು ಹಂತಸ್ತಿನ ಮನೆ ಹಾಗೂ ಬಾಗಲಕೋಟೆಯಲ್ಲಿ ಕಾರು ಸೇರಿ 4.11 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.

ಅರ್ಜಿ ವಿಚಾರಣೆ ವೇಳೆ ಸರಕಾರಿ ಅಭಿಯೋಜಕರು ಹಾಜರಾಗಿ, ಅರ್ಜಿದಾರರ ವಿರುದ್ಧದ ತನಿಖಾಧಿಕಾರಿಗಳು ವಿಚಾರಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ¨ªಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಆಗ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ತನಿಖೆ ಪೂರ್ಣಗೊಂಡಂತಾಗಿದೆ. ಅರ್ಜಿದಾರರು ಪಡೆದಿದ್ದಾರೆ ಎನ್ನಲಾದ ಹಣವನ್ನು ಈಗಾಗಲೇ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇನ್ನೂ ಅವರ ಮೇಲಿನ ಆರೋಪಗಳ ಸತ್ಯಾಸತ್ಯತೆಯು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆ ನಡೆಸಲಿದೆ. ಆದ್ದರಿಂದ ಜಾಮೀನು ನೀಡಲು ಇದು ಅರ್ಹ ಪ್ರಕರಣವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ವಾದವನ್ನು ಪರಿಗಣಿಸಿದ ನ್ಯಾಯಪೀಠ, ಹಾಲಶ್ರೀಸ್ವಾಮೀಜಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಪ್ರಕರಣವೇನು?
ವಂಚನೆ ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿ, ಕಿಂಗ್‌ಪಿನ್‌ ಚೈತ್ರಾ, ಗಗನ್‌ ಸೂಚನೆ ಮೇರೆಗೆ ದೂರುದಾರ ಗೋವಿಂದಬಾಬು ಪೂಜಾರಿಯಿಂದ 1.5 ಕೋಟಿ ರೂ. ಪಡೆದುಕೊಂಡಿದ್ದರು. ಪ್ರಕರಣದಲ್ಲಿ 2023ರ ಸೆ.19ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next