ಚಂಡೋಲಿ: “ವರ್ಷಗಳ ಹಿಂದೆ ತಮ್ಮೊಂದಿಗೆ ಅಸಭ್ಯ ವಾಗಿ ನಡೆದುಕೊಂಡಿದ್ದ ಪಕ್ಷದೊಂದಿಗೆ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ನಾಯಕಿ ಮಾಯಾವತಿ, ಸ್ತ್ರೀ ಕುಲಕ್ಕೇ ಕಳಂಕವಾಗಿದ್ದು ಅವರು ತೃತೀಯ ಲಿಂಗಿಗಳಿಗಿಂತಲೂ ಕಡೆಯವರು’ ಎಂದು ಹೇಳುವ ಮೂಲಕ ಮುಘಲ್‌ಸರಾಯ್‌ನ ಬಿಜೆಪಿ ಶಾಸಕಿ ಸಾಧನಾ ಸಿಂಗ್, ಉತ್ತರ ಪ್ರದೇಶ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ. ವಿವಾದ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಸಾಧನಾ ಅವರು, ಮಾಯಾವತಿ ಕ್ಷಮೆ ಕೋರಿದ್ದಾರೆ. ಶನಿವಾರ, ಮುಘಲ್‌ಸರಾಯ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಸಾಧನಾ, 1995ರಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ-ಎಸ್‌ಪಿ ಮೈತ್ರಿ ಸರಕಾರವಿದ್ದಾಗ, ಮಾಯಾವತಿ ಮೇಲೆ ನಡೆದಿದ್ದ ಹಲ್ಲೆ ಘಟನೆ ಉಲ್ಲೇಖೀಸಿ, ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು. ಅವರ ಹೇಳಿಕೆ ವಿವಾದಕ್ಕೆ ಕಾರಣ ವಾಗಿ, ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದವು. ಪೊಲೀಸ್ ಕೇಸ್ ದಾಖಲಾಗಿದ್ದಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗ ಸಾಧನಾ ಅವರಿಗೆ ನೋಟಿಸ್ ಜಾರಿಗೊಳಿಸುವುದಾಗಿ ಹೇಳಿತು. ಈ ಹಿನ್ನೆಲೆಯಲ್ಲಿ ಸಾಧನಾ ಅವರು ಮಾಯಾವತಿ ಕ್ಷಮೆ ಕೋರಿದ್ದಾರೆ.