ಭುವನೇಶ್ವರ್: ಭಾರತೀಯ ಜನತಾ ಪಕ್ಷದ ದಿಯೋಗಢ್ ಶಾಸಕ ಸುಭಾಶ್ ಪನಿಗ್ರಾಹಿ ಅವರು ಒಡಿಶಾ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಇದನ್ನೂ ಓದಿ:ನಾವು ‘ಐಟಂ ಗರ್ಲ್’ ಅಲ್ಲ, ಐಟಂ ಪದದ ಅರ್ಥ ಏನು ? ನಟಿ ಎಲಿ ಅವ್ರಾಮ್
ಶುಕ್ರವಾರ(ಮಾರ್ಚ್ 12)ಒಡಿಶಾ ವಿಧಾನಸಭೆ ಬಜೆಟ್ ಅಧಿವೇಶನದ ಆರಂಭವಾದ ಸಂದರ್ಭದಲ್ಲಿ ವಿರೋಧ ಪಕ್ಷವಾದ ಬಿಜೆಪಿ ಹಾಗೂ ಕಾಂಗ್ರೆಸ್ ಮಂಡಿಗಳಲ್ಲಿ ಭತ್ತದ ಸಂಗ್ರಹದ ವಿಚಾರಕ್ಕೆ ಸಂಬಂಧಿಸಿದಂತೆ ಕಲಾಪದಲ್ಲಿ ಗದ್ದಲ, ಕೋಲಾಹಲ ನಡೆಸಿದ್ದವು.
ಶುಕ್ರವಾರ ಮಧ್ಯಾಹ್ನ ಬಜೆಟ್ ಅಧಿವೇಶನದಲ್ಲಿ ಆಹಾರ ಸರಬರಾಜು, ಗ್ರಾಹಕ ಕಲ್ಯಾಣ ಸಚಿವ ರಾಣೇಂದ್ರ ಪ್ರತಾಪ್ ಸೈನ್ ಅವರು ರಾಜ್ಯದಲ್ಲಿ ಭತ್ತದ ಸಂಗ್ರಹದ ಕುರಿತ ಪ್ರಶ್ನೆಗೆ ಉತ್ತರ ನೀಡುವ ವೇಳೆ ಶಾಸಕ ಪನಿಗ್ರಾಹಿ ಸದನದೊಳಗೆ ಸ್ಯಾನಿಟೈಸರ್ ಕುಡಿಯಲು ಯತ್ನಿಸಿರುವ ಘಟನೆ ನಡೆದಿತ್ತು ಎಂದು ವರದಿ ತಿಳಿಸಿದೆ.
ಖರೀದಿ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಒತ್ತಾಯಿಸಿ ಶಾಸಕ ಸುಭಾಸ್ ಚಂದ್ರ ಪನಿಗ್ರಾಹಿ ಅವರು ಈ ಹಿಂದೆ ಸ್ವಯಂ ಬೆಂಕಿ ಹಚ್ಚಿಕೊಳ್ಳುವುದಾಗಿ ಎರಡು ಬಾರಿ ಬೆದರಿಕೆಯೊಡ್ಡಿದ್ದರು.
ಬಿಜೆಪಿ ಶಾಸಕ ಅಧಿವೇಶನದಲ್ಲಿ ಆತ್ಮಹತ್ಯೆಗೆ ಯತ್ನಿಸುವ ಮುನ್ನ, ಆಹಾರ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಸಚಿವ ರಾಣೇಂದ್ರ ಪ್ರತಾಪ್ ಸ್ವೈನ್ ಮಾತನಾಡಿ, ಖಾರೀಫ್ ಭತ್ತದ ಸಂಗ್ರಹಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮವನ್ನು ಸರ್ಕಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು.
ಒಂದು ವೇಳೆ ಮಂಡಿಯಲ್ಲಿ ಯಾವುದೇ ರೈತರು ತಮ್ಮ ಭತ್ತವನ್ನು ಮಾರಾಟ ಮಾಡಲು ಸಾಧ್ಯವಾಗದವರು ಇದ್ದರೆ ಅಂತಹವರ ಪಟ್ಟಿ ನೀಡುವಂತೆ ಶಾಸಕ ಪನಿಗ್ರಾಹಿಗೆ ಸಚಿವರು ಮನವಿ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.