ಬಳ್ಳಾರಿ: ಕಾಂಗ್ರೆಸ್-ಭ್ರಷ್ಟಾಚಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಾಂಗ್ರೆಸ್ ಇರೋ ಕಡೆ ಕಮೀಷನ್ ಇರುತ್ತದೆ. ಬಿಜೆಪಿ ಇರುವ ಕಡೆ ಮಿಷನ್ ಇರುತ್ತದೆ. 2023ರಲ್ಲಿ ಕರ್ನಾಟಕದಲ್ಲಿ ಕಮಲ ಅರಳುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ರಾಜ್ಯದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಹೊಸಪೇಟೆಯಲ್ಲಿ ಭಾನುವಾರ ಸಂಜೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಾತನಾಡುವುದು ಒಂದು, ಮಾಡುವುದು ಮತ್ತೂಂದು. ಕಾಂಗ್ರೆಸ್ ಇದ್ದಲ್ಲಿ ಭ್ರಷ್ಟಾಚಾರ, ಕಾಂಗ್ರೆಸ್ ಇದ್ದಲ್ಲಿ ಕಮಿಷನ್ ಇರುತ್ತೆ. ಬಿಜೆಪಿ ಮಿಷನ್ ಹಿಂದೆ ಹೋದ್ರೆ, ಕಾಂಗ್ರೆಸ್ ಕಮಿಷನ್ ಹಿಂದೆ ಹೋಗುತ್ತದೆ. ಆತಂಕವಾದಿಗಳ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರು, ಒಳಗೊಳಗೆ ಅವರ ಪರವಾಗಿದ್ದಾರೆ. ಧರ್ಮ ಧರ್ಮದ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಸಂಘರ್ಷ ತರುವ ಕೆಲಸ ಮಾಡುತ್ತಿದೆ. ಕಳೆದ 70 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಇದೇ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಉತ್ತರ ಪ್ರದೇಶದಲ್ಲಿ 38 ವರ್ಷಗಳ ಬಳಿಕ ಪುನಃ ಅಧಿಕಾರಕ್ಕೆ ಬಂದಿದ್ದೇವೆ. ಯೋಗಿ ಮುಖ್ಯಮಂತ್ರಿಯಾಗಿ ಪುನಃ ಗೆದ್ದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲ. ಇನ್ನು ಮೊದಲಿನಿಂದಲೂ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರವಿದೆ. ಗೋವಾದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಮಣಿಪುರದಲ್ಲಿ ಅಭಿವೃದ್ಧಿ ಆಗುತ್ತಿದೆ. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಭಿವೃದ್ಧಿ ನೋಡಿ ಜನರು ಮತ್ತೂಮ್ಮೆ ಅಧಿಕಾರ ನೀಡಿದ್ದಾರೆ. ಆದರೆ, ಪಂಜಾಬ್ ಒಂದರಲ್ಲಿ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್, ಇದೀಗ ಅದನ್ನೂ ಕಳೆದುಕೊಂಡಿದ್ದು, ಹೀನಾಯವಾಗಿ ಸೋಲು ಕಂಡಿದೆ ಎಂದು ವ್ಯಂಗ್ಯವಾಡಿದರು.
ಭಾರತ ಬದಲಾವಣೆಯಾಗಿದೆ. ಬೆಂಗಳೂರು ವಿಶ್ವದ 2ನೇ ಐಟಿ ಹಬ್ ಆಗಿದೆ. ಕೋವಿಡ್ ನಡುವೆಯೂ ಕೇಂದ್ರದಲ್ಲಿ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ದಾಟಿದೆ. ಆದಾಯ ತೆರಿಗೆ ಸಂಗ್ರಹ ಶೇ. 34ರಷ್ಟು ಹೆಚ್ಚಳವಾಗಿದೆ. ದೇಶದ ಆರ್ಥಿಕಾಭಿವೃದ್ಧಿ ತೀವ್ರವಾಗಿ ಬೆಳೆಯುತ್ತಿದೆ. ದೇಶದ ತಲಾದಾಯ ಶೇ. 7ರಿಂದ ಶೇ.8.1ಕ್ಕೆ ಏರಿಕೆಯಾಗಿದೆ. ಉದ್ಯೋಗ ನೀಡುವಲ್ಲಿ ವೇಗ ಹೆಚ್ಚಿಸಿಕೊಂಡಿದೆ ಎಂದ ಅವರು, ಬಿಜೆಪಿ ಧರ್ಮ, ಪರಿವಾರ, ಜಾತಿ ಆಧಾರದಲ್ಲಿ ನಡೆಯಲ್ಲ. ಬಿಜೆಪಿ ವಿಕಾಸವಾದ, ಮೋದಿ ನೇತೃತ್ವದ ವಿಕಾಸವಾದದ ಮೇಲೆ ನಡೆಯುತ್ತಿದೆ. ಚುನಾವಣೆಗೂ ಮುನ್ನ ಪುನಃ ಮತ್ತೂಮ್ಮೆ ರಾಜ್ಯಕ್ಕೆ ಬರುತ್ತೇವೆ. ಮತ್ತೆ ಮತ್ತೆ ಬರುತ್ತಿರುತ್ತೇನೆ. ಸಾಧ್ಯವಾದರೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡುತ್ತೇನೆ ಎಂದು ಕಾರ್ಯಕರ್ತರಲ್ಲಿ ಹುರಿದುಂಬಿಸಿದರು.