ಚೆನ್ನೈ: ತಮಿಳುನಾಡು ಬಿಜೆಪಿ ಹಿಂದುಳಿದ ಜಾತಿ/ಹಿಂದುಳಿದ ವರ್ಗದ ಜಿಲ್ಲಾ ಘಟಕದ ಅಧ್ಯಕ್ಷ ಬಾಲಚಂದ್ರನ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಕೊಲೆಗೈದಿರುವ ಘಟನೆ ಮಂಗಳವಾರ ಚೆನ್ನೈನ ಚಿಂತಾದ್ರಿಪೇಟ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮತ್ತೊಂದು ಶಾಕ್: ಹಿರಿಯ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಗುಡ್ ಬೈ, ಎಸ್ಪಿ ಸೇರ್ಪಡೆ
ಮೂಲಗಳ ಪ್ರಕಾರ, ಬಾಲಚಂದ್ರನ್ ಗೆ ಜೀವಬೆದರಿಕೆ ಇರುವ ಸಂದೇಹದ ಮೇಲೆ ತಮಿಳುನಾಡು ಸರ್ಕಾರ ವೈಯಕ್ತಿಕ ಭದ್ರತಾ ಅಧಿಕಾರಿಯೊಬ್ಬರನ್ನು ನಿಯೋಜಿಸಿತ್ತು. ಭದ್ರತಾ ಅಧಿಕಾರಿ ಟೀ ಕುಡಿಯಲು ತೆರಳಿದ್ದ ವೇಳೆ ಬಾಲಚಂದ್ರನ್ ಅವರನ್ನು ಹತ್ಯೆಗೈಯಲಾಗಿದೆ.
ಮೂವರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಆಗಮಿಸಿದ್ದು, ಮಾರಕಾಯುಧದಿಂದ ಹಲ್ಲೆಗೈದು ಪರಾರಿಯಾಗಿದ್ದರು. ಘಟನೆಯಲ್ಲಿ ಬಾಲಚಂದ್ರನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇದು ಹಿಂದಿನ ದ್ವೇಷದಿಂದ ನಡೆದ ಘಟನೆಯಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಆರೋಪಿಗಳನ್ನು ಬಂಧಿಸಲು ನಾವು ವಿಶೇಷ ತಂಡವನ್ನು ರಚಿಸಿದ್ದೇವೆ. ಒಂದು ವೇಳೆ ಯಾವುದಾದರು ಲೋಪ ನಡೆದಿದೆಯೇ ಎಂದು ಪರಿಶೀಲಿಸಲು ಸ್ಥಳಕ್ಕೆ ನೀಡಿರುವುದಾಗಿ ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ತಿಳಿಸಿದ್ದಾರೆ.
ಕೊಲೆ ನಡೆದ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿಯನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ. ಘಟನೆ ಬಗ್ಗೆ ತಮಿಳುನಾಡು ವಿರೋಧ ಪಕ್ಷದ ಮುಖಂಡ ಇ.ಕೆ.ಪಳನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ವೈಫಲ್ಯತೆಯಾಗಿದೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನಲ್ಲಿ 20 ದಿನದಲ್ಲಿ 18 ಕೊಲೆ ಪ್ರಕರಣಗಳು ವರದಿಯಾಗಿದೆ. ಇಂತಹ ಘಟನೆಯಿಂದ ರಾಜಧಾನಿ ಕೊಲೆಗಡುಕರ ನಗರವಾಗಿ ಬದಲಾಗುತ್ತಿದೆ. ಇದರಿಂದಾಗಿ ರಾಜ್ಯದ ಜನರ ರಕ್ಷಣೆಯ ಪ್ರಶ್ನೆ ತಲೆದೋರಿದೆ ಎಂದು ಪಳನಿಸ್ವಾಮಿ ಕಿಡಿಕಾರಿದ್ದಾರೆ.