ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ರದ್ದುಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ಸೈದ್ಧಾಂತಿಕವಾಗಿ ವಿರೋಧಿಸಲು ನಿರ್ಧರಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ಇದೇ 22ರಂದು ಮಹತ್ವದ ಸಭೆ ಆಯೋಜಿಸಲಾಗಿದೆ.
ವಿಶ್ರಾಂತ ಕುಲಪತಿಗಳು, ಶಿಕ್ಷಣ ತಜ್ಞರು, ಸಿಂಡಿಕೇಟ್‌ನ ಮಾಜಿ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸುರೇಶ್ ಕುಮಾರ್, ಅಶ್ವತ್ಥನಾರಾಯಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಎನ್.ಮಹೇಶ್, ಬಿ.ಸಿ.ನಾಗೇಶ್, ಶಿಕ್ಷಕ-ಪದವಿಧರ ಕ್ಷೇತ್ರದ ಹಾಲಿ ಹಾಗೂ ಮಾಜಿ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಶುಕ್ರವಾರ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ-2020’ರ ಕುರಿತು ಯಾವುದೇ ಚರ್ಚೆ ನಡೆಸದೆ, ಲೋಪ ದೋಷಗಳು ಏನಿದೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಸದೆಯೇ ಮುಂದಿನ ವರ್ಷದಿಂದ ರದ್ದುಗೊಳಿಸುವುದಾಗಿ ಹೇಳಿರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಇಪಿ-2020 ರೂಪಿಸಲು ಸುಮಾರು ಒಂದು ದಶಕದ ಕಾಲ ಅನೇಕ ವಿಜ್ಞಾನಿಗಳು, ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ಶೈಕ್ಷಣಿಕ ತರಬೇತುದಾರರು ಶ್ರಮಿಸಿದ್ದಾರೆ. ಸಮಾಜದ ಪ್ರತಿಯೊಂದು ವಲಯದಿಂದ ಸುಮಾರು 2 ಲಕ್ಷ ಅಭಿಪ್ರಾಯಗಳನ್ನು ಸಂಗ್ರಹಿಸಿ ಪರಿಗಣಿಸಲಾಗಿದೆ. ಕರ್ನಾಟಕದಿಂದಲೂ ಅನೇಕ ಶಿಕ್ಷಣ ತಜ್ಞರು, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಸಂಘ-ಸಂಸ್ಥೆಗಳು ಕೊಡುಗೆ ನೀಡಿವೆ. ದಿಲ್ಲಿಯಿಂದ ಗ್ರಾಮದ ವರೆಗೆ ಪ್ರತಿಯೊಂದು ಹಂತದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.
ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಉಳ್ಳವರ ಮಕ್ಕಳು ಸಿಬಿಎಸ್‌ಇ ಶಾಲೆಗಳಲ್ಲಿ ಕಲಿಯುತ್ತಿದ್ಧಾರೆ. ಇಂಥ ಶಾಲೆಗಳು ರಾಜಕಾರಣಿಗಳು, ಉದ್ಯಮಿಗಳ ನೇರ ಮಾಲೀಕತ್ವ ಅಥವಾ ಪರೋಕ್ಷವಾಗಿ ನಿಯಂತ್ರಣದಲ್ಲಿವೆ. ಸಿಬಿಎಸ್ ಇಯಲ್ಲಿ ಕಳೆದ 2 ವರ್ಷಗಳಿಂದ ಎನ್‌ಇಪಿ-2020 ಅನುಷ್ಠಾನಗೊಂಡಿದೆ. ನೂತನ ಪಠ್ಯಕ್ರಮವನ್ನು ಈ ಶಾಲೆಗಳು ಪಾಲಿಸುತ್ತಿವೆ. ರಾಜಕಾರಣಿಗಳು ತಮ್ಮ ಒಡೆತನದ ಶಾಲೆಗಳಲ್ಲಿ ಎನ್‌ಇಪಿ-2020 ಅನುಷ್ಠಾನಗೊಳಿಸಿದ್ಧಾರೆ. ಆದರೆ, ಸರ್ಕಾರಿ ಶಾಲೆಗಳು ಹಾಗೂ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಮಾತ್ರ ರಾಜ್ಯ ಶಿಕ್ಷಣ ನೀತಿ’ ಅನುಷ್ಠಾನ ಮಾಡುವುದಾಗಿ ಹೇಳಿರುವುದನ್ನು ನೋಡಿದರೆ, ಈ ಸರ್ಕಾರಕ್ಕೆ ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆಯಬಾರದು ಎಂಬ ದುರುದ್ದೇಶ ಸ್ಪಷ್ಟವಾಗಿ ಕಾಣಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.