Advertisement

‘ಬಿಜೆಪಿಗೆ ಆತುರ ಇರಬಹುದು, ನನಗಿಲ್ಲ’

09:25 AM Jul 20, 2019 | Sriram |

ಬೆಂಗಳೂರು: ‘ವಿಶ್ವಾಸಮತ ಕುರಿತು ನಿಮಗೆ (ಬಿಜೆಪಿ) ಆತುರ ಇರಬಹುದು. ಆದರೆ, ನನಗೆ ಯಾವುದೇ ಆತುರ ಇಲ್ಲ. ನಾನು ಅಧಿಕಾರದಲ್ಲಿ ಶಾಶ್ವತವಾಗಿ ಗೂಟ ಹೊಡೆದು ಕೊಂಡು ಕುಳಿತಿರುತ್ತೇನೆ ಅಂದು ಕೊಂಡೂ ಇಲ್ಲ. ಆದರೆ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಹಾಗೂ ಇಂತಹ ಪರಿಸ್ಥಿತಿಗೆ ಕಾರಣಗಳ ಬಗ್ಗೆ ರಾಜ್ಯದ ಜನತೆಗೆ ತಿಳಿಸಬೇಕಾಗಿದೆ’ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿ ಮಾತನಾಡಿದ ಅವರು, ಈ ಅಧಿಕಾರ ಶಾಶ್ವತ ಎಂದು ನಾನು ಅಂದುಕೊಂಡಿಲ್ಲ, ಆದರೆ, 14 ತಿಂಗಳಲ್ಲಿ ಸರ್ಕಾರ ಪತನಕ್ಕೆ ಸಾಕಷ್ಟು ಪ್ರಯತ್ನಗಳು ನಡೆದವು. ಯಾರ್ಯಾರು, ಏನೇನು ಮಾಡಿದರು ಎಂಬುದು ನಾನು ಸದನದ ಮೂಲಕ ತಿಳಿಸಬೇಕಾಗಿದೆ ಎಂದು ತಿಳಿಸಿದರು. ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿರುವ ಶಾಸಕರು, ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ, ಐಎಂಎ ಹಗರಣ, ಜಿಂದಾಲ್ಗೆ ಭೂಮಿ ಪರಭಾರೆ ಮತ್ತಿತರ ವಿಚಾರ ಪ್ರಸ್ತಾಪಿಸಿದ್ದಾರೆ. ಆ ಎಲ್ಲದಕ್ಕೂ ನಾನು ಉತ್ತರ ಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಶಾಸಕರ ಬಗ್ಗೆ ಜನಸಾಮಾನ್ಯರಲ್ಲಿ ಅಸಹ್ಯ ಭಾವನೆ ಮೂಡಿಸಿದೆ. ನಾನೂ ಸೇರಿ ಇಲ್ಲಿರುವ ಸ್ನೇಹಿತರು ಇನ್ನೂ ಮಾನ ಮರ್ಯಾದೆ ಇಟ್ಟು ಕೊಂಡು ಬದುಕುತ್ತಿದ್ದೇವೆ. ಏಳೆಂಟು ದಿನಗಳಿಂದ ನಡೆಯು ತ್ತಿರುವ ವಿದ್ಯಮಾನಗಳು ಸಾಕಷ್ಟು ಚರ್ಚೆಯಾಗುತ್ತಿವೆ. ಈ ಹಂತದಲ್ಲಿ ದೇಶ ನಮ್ಮನ್ನು ಗಮನಿಸುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದಾಗ ಕಲಬೆರಕೆ ಸರ್ಕಾರ ಬೇಕಾ, ಬಲಿಷ್ಠ ಸರ್ಕಾರ ಬೇಕಾ ಎಂದು ಕೇಳಿದ್ದರು. ಆ ನಂತರ ರಾಜ್ಯದಲ್ಲಿ ನಡೆದ ಘಟನೆಗಳನ್ನು ನೋಡುತ್ತಿದ್ದೇವೆ. ಇದೆಲ್ಲರ ಬಗ್ಗೆ ಚರ್ಚೆ ಮಾಡದೆ ವಿಶ್ವಾಸಮತ ಕೇಳಿ ಹೋದರೆ ನಮ್ಮ ಮೇಲೆ ಶಂಕೆ ಹಾಗೆಯೆ ಉಳಿಯುತ್ತದೆ. ಹೀಗಾಗಿ, ರಾಜ್ಯದ ಜನರಿಗೆ ನಾನು ಸ್ಪಷ್ಟನೆ ಕೊಡಬೇಕಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಪ್ರತಿಪಕ್ಷ ನಾಯಕರು ಸಾಕಷ್ಟು ಪ್ರವಾಸ ಮಾಡಿ ಬಂದಿದ್ದಾರೆ. ಆ ವಿಚಾರದಲ್ಲಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನೂ ನಾನು ತಿಳಿಸಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕು ನಾಟಕ ದೇಶದ ಜನತೆಗೆ ಗೊತ್ತಾಗಬೇಕು ಎಂದು ಹೇಳಿದರು.

Advertisement

ಈ ಸದನ ದೇವರಾಜ ಅರಸು ಅವರಂತಹ ನಾಯಕರನ್ನು ಕಂಡಿದೆ. ಅವರು ಎಂಟು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಅವರು ಮುಖ್ಯಮಂತ್ರಿಯಾಗಿದ್ದಾಗ ನಾವು ಆಟ ಆಡೋ ಮಕ್ಕಳು. ಅಲ್ಲಿಂದ ಪ್ರಾರಂಭವಾಗಿ ರಾಮಕೃಷ್ಣ ಹೆಗಡೆ ಸಹಿತ ಸಾಕಷ್ಟು ನಾಯಕರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷಾಂತರ ವಿಚಾರ ಬಂದಾಗ ಒಂದು ಕಾಯ್ದೆಯನ್ನೂ ಮಾಡಿದ್ದಾರೆ. ಅದಕ್ಕೆ ಮಹತ್ವವೂ ಇದೆ. ಶಾಸಕರು ಒಂದು ಪಕ್ಷದಿಂದ ಚಿಹ್ನೆಯಡಿ ಗೆದ್ದು ಬೇರೆ ಪಕ್ಷಕ್ಕೆ ಹೋಗುವುದು, ವಾಮ ಮಾರ್ಗದಲ್ಲಿ ಸರ್ಕಾರ ಪತನಗೊಳಿಸಲು ಯತ್ನಿಸುವುದು ಇವೆಲ್ಲವೂ ಪ್ರಜಾಪ್ತಭುತ್ವಕ್ಕೆ ಮಾರಕವಾಗುವ ಬೆಳವಣಿಗೆಗಳು ಎಂದು ತಿಳಿಸಿದರು.

ಸಿದ್ಧತೆ ಮಾಡಿಕೊಂಡೇ ಬಂದಿದ್ದ ಎಚ್‌ಡಿಕೆ
ವಿಶ್ವಾಸಮತ ಯಾಚನೆ ನಿರ್ಣಯ ಮಂಡನೆ ಮೇಲೆ ಸುದೀರ್ಘ‌ವಾಗಿ ಮಾತನಾಡಲು ಸಿದ್ಧತೆ ಮಾಡಿಕೊಂಡೇ ಬಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಹಿಂದಿನ ಜೆಡಿಎಸ್‌-ಬಿಜೆಪಿ ಸರ್ಕಾರ, ಆ ನಂತರದ ಬಿಜೆಪಿ ಸರ್ಕಾರದಲ್ಲಿ ಆದ ಬೆಳವಣಿಗೆಗಳ ಕ್ಲಿಪಿಂಗ್ಸ್‌ ಸಮೇತ ಬಂದಿದ್ದರು. ಇದಕ್ಕಾಗಿ ಎರಡು ದಿನಗಳಿಂದ ಮಾಹಿತಿ ಸಂಗ್ರಹಿಸಿ ದಾಖಲೆ ಮಾಡಿಟ್ಟುಕೊಂಡಿದ್ದರು. ಕಡತದ ಜತೆಯೇ ಸದನಕ್ಕೆ ಆಗಮಿಸಿದ್ದರು. ಇದರ ನಡುವೆ, ರಾಜ್ಯಪಾಲರಿಂದ ಸ್ಪೀಕರ್‌ಗೆ ಸಂದೇಶ ಬಂದಾಗ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಾಸಕರೊಬ್ಬರ ಮೂಲಕ ರಾಜ್ಯಪಾಲರಿಗೆ ಸ್ಪೀಕರ್‌ಗೆ ನಿರ್ದೇಶನ ನೀಡುವ ಅಧಿಕಾರ ಇಲ್ಲ ಎಂದು ಚೀಟಿಯಲ್ಲಿ ಬರೆದು ಮುಖ್ಯಮಂತ್ರಿಯವರಿಗೆ ತಲುಪಿಸಿದರು ಎಂದು ಹೇಳಲಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next