ನಾಗಮಂಗಲ: ಆದಿ ಚುಂಚನಗಿರಿ ಶ್ರೀಗಳು ಬಿಜೆಪಿ ನಾಯಕ ರಿಗೆ ಬುದ್ಧಿ ಹೇಳಿದ್ದೇ ತಪ್ಪು. ಇದನ್ನು ನಾನು ಶ್ರೀಮಠದಲ್ಲಿ ನಿಂತುಕೊಂಡೇ ಹೇಳುತ್ತಿದ್ದೇನೆ. ಬಿಜೆಪಿ ನಾಯಕರಿಗೆ ಬುದ್ಧಿ ಹೇಳುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಒಕ್ಕಲಿಗ ಸಮುದಾಯಕ್ಕೆ ಕಳಂಕ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಒಕ್ಕಲಿಗರು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದು ನಮ್ಮ ಸಮಾಜದ ಸ್ವಾಭಿಮಾನದ ಪ್ರಶ್ನೆ. ಸರಕಾರದ ಭ್ರಷ್ಟಾಚಾರವನ್ನು ಮರೆಮಾಚಲು ಉರಿಗೌಡ, ನಂಜೇಗೌಡ ಕಥೆ ಕಟ್ಟಿದ್ದಾರೆ ಎಂದರು.
ಒಕ್ಕಲಿಗರಿಗೆ ಅರಗಿಸಿಕೊಳ್ಳುವ ಶಕ್ತಿಯಿದೆ. ನಾವ್ಯಾರೂ ಹೇಡಿ ಗಳಲ್ಲ. ಉರಿಗೌಡ, ನಂಜೇಗೌಡ ಎಂದು ಸಿ.ಟಿ. ರವಿ, ಅಶೋಕ್, ಅಶ್ವತ್ಥ ನಾರಾಯಣ ಹೊಸದಾಗಿ ಕಥೆ ಬರೆಯುತ್ತಿದ್ದಾರೆ. ಸಿನೆಮಾ ಮಾಡೋಕೂ ಮುಂದಾಗಿದ್ದರು. ಬಿಜೆಪಿ ಯವರ ಈ ಕೆಲಸವನ್ನು ಖಂಡಿಸುತ್ತೇನೆ. ಭ್ರಷ್ಟಾಚಾರದ ಬಗ್ಗೆ ಸಿನೆಮಾ ತೆಗೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಗಳೊಂದಿಗೆ ಗೌಪ್ಯ ಚರ್ಚೆ
ಆದಿಚುಂಚನಗಿರಿ ಕ್ಷೇತ್ರದ ಶ್ರೀಕಾಲಭೈರವೇಶ್ವರ ಸ್ವಾಮಿ ದೇಗುಲಕ್ಕೆ ಪತ್ನಿಯೊಂದಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ವಿಶೇಷ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಅನಂತರ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಗದ್ದುಗೆ ಮತ್ತು ನಾಥಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ಶ್ರೀಗಳೊಂದಿಗೆ ಕೆಲಕಾಲ ಗೌಪ್ಯ ಚರ್ಚೆ ನಡೆಸಿದರು.