Advertisement
ಬಹುತೇಕ ರಾಜ್ಯದ ವಿಧಾನಸಭೆ ಇತಿಹಾಸದಲ್ಲಿ ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ವಿರುದ್ಧ ನೇರವಾಗಿ ಆರೋಪ ಮಾಡಿದರೂ ಪ್ರತಿಪಕ್ಷದ ಶಾಸಕರು ಅಸಹಾಯಕರಾಗಿ ಕುಳಿತ ಪ್ರಸಂಗ ನಡೆದಿರುವುದು ಇದೇ ಮೊದಲು ಎನಿಸುತ್ತಿದೆ.
Related Articles
Advertisement
ಜೆ.ಸಿ.ಮಾಧುಸ್ವಾಮಿ ಬದಲು ಯಾರಾದರೂ ಮೇಲೆದ್ದು ಆಡಳಿತ ಪಕ್ಷದ ವಿರುದ್ಧ ಮಾತನಾಡಲು ಮುಂದಾದರೆ, ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಸೇರಿ ಬಹುತೇಕ ನಾಯಕರು ತಳಮಳಗೊಂಡು ಅವರನ್ನು ಸುಮ್ಮನೆ ಕೂಡುವಂತೆ ಸೂಚನೆ ನೀಡುವುದರಲ್ಲಿಯೇ ನಿರತರಾಗಿದ್ದು ಕಂಡು ಬಂತು. ಅದಕ್ಕೆ ತದ್ವಿರುದ್ಧವಾಗಿ ಆಡಳಿತ ಪಕ್ಷದ ಶಾಸಕರು ಮಾತ್ರ ಪ್ರತಿಯೊಂದು ವಿಷಯಕ್ಕೂ ಮೇಲೆ ಬಿದ್ದು ಜೋರಾಗಿ ಕೂಗುತ್ತಿದ್ದುದು ಸಾಮಾನ್ಯವಾಗಿತ್ತು.
ಆಡಳಿತ ಪಕ್ಷಕ್ಕೆ ಸಿಕ್ಕ ಶ್ರೀಮಂತ ಪಾಟೀಲ್ ಅಸ್ತ್ರ: ಮಧ್ಯಾಹ್ನದವರೆಗೂ ಬಿಜೆಪಿಯವರನ್ನು ಕೆಣಕಲು ಆಡಳಿತ ಪಕ್ಷದ ಸದಸ್ಯರು ನಡೆಸಿದ ಪ್ರಯತ್ನ ಅಷ್ಟೊಂದು ಯಶಸ್ವಿಯಾದಂತೆ ಕಾಣಲಿಲ್ಲ. ಆಡಳಿತ ಪಕ್ಷದ ನಾಯಕರು ಹಾಗೂ ಶಾಸಕರಿಂದ ಮಾತಿನ ಬಾಣಗಳು ನೇರವಾತಿ ತಮಗೇ ತಾಗುತ್ತಿದ್ದರೂ, ಬಿಜೆಪಿಯವರು ಎಲ್ಲವನ್ನೂ ಸಹಿಸಿಕೊಂಡು ಏನೂ ಆಗಿಲ್ಲ ಎನ್ನುವಂತೆ ಕುಳಿತುಕೊಂಡಿದ್ದರು.
ಮಧ್ಯಾಹ್ನ ಭೋಜನ ವಿರಾಮದ ನಂತರ ಆಡಳಿತ ಪಕ್ಷದ ಶಾಸಕರು ಹಾಗೂ ಸಚಿವರು ಬಿಜೆಪಿಯವರನ್ನು ಕೆಣಕುವ ತಂತ್ರಗಾರಿಕೆಯನ್ನು ಮತ್ತಷ್ಟು ತೀವ್ರಗೊಳಿಸಿ ದರು. ಅದಕ್ಕೆ ಬಿಜೆಪಿಯವರೇ ಬಿಟ್ಟಿದ್ದಾರೆ ಎನ್ನಲಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೃದಯ ಬೇನೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೊಗಳನ್ನೇ ಅಸ್ತ್ರಗಳನ್ನಾಗಿ ಬಳಸಿ, ಬಿಜೆಪಿ ವಿರುದ್ಧ ನೇರ ವಾಗ್ಧಾಳಿ ನಡೆಸಿದರು.
ಸಚಿವ ಡಿ.ಕೆ.ಶಿವಕುಮಾರ್ ನಮ್ಮ ಶಾಸಕರನ್ನು ಅಪಹರಣ ಮಾಡಲಾಗಿದೆ. ಅವರನ್ನು ಉಳಿಸಿಕೊಡಿ ಎಂದು ಆವೇಶಭರಿತರಾಗಿ ಬೇಡಿಕೊಳ್ಳುವ ಮೂಲಕ ಬಿಜೆಪಿಯವರನ್ನು ಕೆಣಕುವ ಪ್ರಯತ್ನ ನಡೆಸಿದರು. ಅದೇ ಅಸ್ತ್ರವನ್ನು ಸಮರ್ಥವಾಗಿ ಬಳಸಲು ತೀರ್ಮಾನ ಮಾಡಿಕೊಂಡೇ ಬಂದಂತೆ ಕಂಡ ಆಡಳಿತ ಪಕ್ಷದ ಸದಸ್ಯರು ನೇರವಾಗಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದರೂ, ಬಿಜೆಪಿ ಶಾಸಕರು ಮಾತ್ರ ಆಡಳಿತ ಪಕ್ಷದ ಶಾಸಕರ ಮೇಲಿನ ಕೋಪವನ್ನು ಹೊರ ಹಾಕಲೂ ಆಗದೇ, ಮನಸ್ಸಿನಲ್ಲಿ ಇಟ್ಟುಕೊಳ್ಳಲೂ ಆಗದೇ ಕುಳಿತಲ್ಲೇ ತಮ್ಮ ಕೈಯನ್ನು ತಾವೇ ಹಿಚುಕಿಕೊಂಡಿದ್ದು ಮಾತ್ರ ವಿಪರ್ಯಾಸ.
ಯಡಿಯೂರಪ್ಪ ಮೌನವೇ ಆಶ್ಚರ್ಯರಾಜ್ಯದ ಇತಿಹಾಸದಲ್ಲಿ ಪ್ರತಿಪಕ್ಷದ ನಾಯಕ ಅಂದರೆ ಯಡಿಯೂರಪ್ಪ ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಒಂದು ಕಾಲದಲ್ಲಿ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವುದು ಯಡಿಯೂರಪ್ಪ ಪ್ರತಿಪಕ್ಷದ ನಾಯಕರಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿಯಿಂದ ಪ್ರಚಲಿತವಾಗಿದ್ದ ಮಾತು. ಆದರೆ, ಗುರುವಾರ ಸದನದಲ್ಲಿ ಆಡಳಿತ ಪಕ್ಷದವರು ಪ್ರತಿಪಕ್ಷದವರ ವಿರುದ್ಧ ನೇರವಾಗಿ ಅಷ್ಟೊಂದು ಆರೋಪ ಮಾಡುತ್ತಿದ್ದರೂ, ಯಡಿಯೂರಪ್ಪ ಮಾತ್ರ ತಮ್ಮ ಆಕ್ರೋಶವನ್ನು ನಿಯಂತ್ರಿಸಿಕೊಂಡು ಕುಳಿತಿದ್ದು, ಪರಿಸ್ಥಿತಿ ಅವರನ್ನು ಕಟ್ಟಿ ಹಾಕಿದಂತಿತ್ತು. ಕಲಾಪದಲ್ಲಿ ಪ್ರತಿಯೊಂದಕ್ಕೂ ಎದ್ದು ನಿಂತು ಆಕ್ಷೇಪ ಎತ್ತಿ, ಗಲಾಟೆ ಮಾಡುತ್ತಿದ್ದ ಬಿಜೆಪಿಯ ಸಿ.ಟಿ.ರವಿ, ಎಂ.ಪಿ.ರೇಣುಕಾಚಾರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಅವರಿಗೆ ಸ್ಪೀಕರ್ ಅವರ ಕಾರ್ಯ ವೈಖರಿಯ ಬಗ್ಗೆಯೂ ಅಸಮಾಧಾನ ಇದ್ದಂತೆ ಕಂಡು ಬಂತು. ಆದರೂ, ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದು, ರಾಜ್ಯ ವಿಧಾನಸಭೆ ಇತಿಹಾಸದಲ್ಲಿ ಹೊಸದೊಂದು ದಾಖಲೆಗೆ ಸಾಕ್ಷಿಯಾದಂತಾಯಿತು. ಆಡಳಿತ ಪಕ್ಷದ ಸದಸ್ಯರು ಏನೇ ಆರೋಪ ಮಾಡಿದರೂ, ಗಲಾಟೆ ಮಾಡದೆ, ಬಾವಿಗಿಳಿದು ಪ್ರತಿಭಟನೆ ಮಾಡದೆ ಬಿಜೆಪಿ ಶಾಸಕರು ಶಾಂತರೀತಿಯಿಂದ ಕುಳಿತುಕೊಳ್ಳಲು ಸ್ಪೀಕರ್ ಅಮಾನತು ಮಾಡಿದರೆ, ಸದನದಿಂದ ಹೊರ ಹೋಗಬೇಕಾಗುತ್ತದೆ ಎನ್ನುವ ಆತಂಕ ಕಾಡಿದಂತಿತ್ತು. ಆಡಳಿತ ಪಕ್ಷದ ಸದಸ್ಯರು ಬಿಜೆಪಿಯವರನ್ನು ಕೆಣಕ್ಕಿದ್ದರ ಹಿಂದಿನ ಉದ್ದೇಶವೂ ಅದೇ ಆಗಿತ್ತು ಎನ್ನುವುದು ಮೌನ ವಹಿಸಿ ಕೂತವರ ಮನದ ಮಾತಾಗಿತ್ತು.