ಮಣಿಪಾಲ: ಚಿಂತಾಜನಕ ಸ್ಥಿತಿಯಲ್ಲಿದ್ದ ಭಾರತದ ಅರ್ಥ ವ್ಯವಸ್ಥೆಯನ್ನು ಪ್ರಧಾನಿ ಮೋದಿಯವರು 10 ವರ್ಷದಲ್ಲಿ ಸುಧಾರಿಸಿದ್ದು ಮಾತ್ರವಲ್ಲದೆ, ಮುಂದಿನ ಕೆಲವೇ ವರ್ಷಗಳಲ್ಲಿ ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತವನ್ನು ರೂಪಿಸಲಿದ್ದಾರೆ. ಸದೃಢ ಆರ್ಥಿಕ ವ್ಯವಸ್ಥೆಗೆ “ಮೋದಿ ಮಾಡೆಲ್ ಅಜೆಂಡಾ’ ಆಗಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರ ಮೊದಲು ಭಾರತದ ಆರ್ಥಿಕತೆ ಶೋಚನೀಯ ಸ್ಥಿತಿಯಲ್ಲಿತ್ತು ಎಂಬುದನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ವರದಿಯಲ್ಲಿ ಉಲ್ಲೇಖೀಸಿದ್ದವು. ಅದೇ ಸಂಸ್ಥೆಗಳು ಈಗ ಭಾರತದ ಆರ್ಥಿಕತೆ ವಿಶ್ವದ ಪ್ರಗತಿಶೀಲ ಆರ್ಥಿಕತೆಯಲ್ಲಿ ಒಂದಾಗಿದೆ ಎಂಬುದಾಗಿ ತಿಳಿಸಿವೆ. ಇದು ಮೋದಿ ಗ್ಯಾರಂಟಿ ಎಂದರು.
ದೇಶದ ಗಡಿಯಲ್ಲೂ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ. ಭಾರತದಲ್ಲೇ ಶೇ.98ರಷ್ಟು ಮೊಬೈಲ್ ಉತ್ಪಾದನೆ ಯಾಗುತ್ತಿದೆ ಹಾಗೂ ರಫ್ತು ಪ್ರಮಾಣವೂ ಹೆಚ್ಚಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುವ ಭಾರತದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.
ಅನಂತರ ಪ್ರಶ್ನೋತ್ತರ ನಡೆಯಿತು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆಗೈದರು.
ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ದ.ಕ. ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣ ಸಂಚಾಲಕ ನವೀನ್ ಕುತ್ಯಾರ್ ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ ವಂದಿಸಿ, ರಾಘವೇಂದ್ರ ಕಿಣಿ ನಿರೂಪಿಸಿದರು.
ಪಿಒಕೆ ಅಲ್ಲ, ಅಖಂಡ ಭಾರತ
ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿಸುವುದು ಮಾತ್ರವಲ್ಲ. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ಥಾನದಲ್ಲಿರುವ ಭಾರತದ ಭಾಗವನ್ನು ವಾಪಸ್ ಪಡೆಯಬೇಕು. ಪಿಒಕೆಯನ್ನು ಸಂಯುಕ್ತ ಕಾಶ್ಮೀರದೊಂದಿಗೆ ಸೇರಿಸಬೇಕು ಎಂಬ ಅಭಿಯಾನ ಈಗಾಗಲೇ ಆರಂಭವಾಗಿದೆ. ಪಿಒಕೆ ಕಾಶ್ಮೀರದ ವ್ಯಾಪ್ತಿಗೆ ತರುವ ಕಾರ್ಯವೂ ನಡೆಯಲಿದೆ. ದೇಶದ್ರೋಹ ಹಾಗೂ ದೇಶದ ವಿರುದ್ಧ ಮಾತನಾಡುವವರು, ಘೋಷಣೆ ಕೂಗುವವರಿಗೆ ಕಠಿನ ಕ್ರಮ ಆಗಬೇಕು. ಸದ್ಯ ಇರುವ ಕಾನೂನಿನಲ್ಲಿ ರಾಜ್ಯ ಸರಕಾರ ಆರಂಭದಲ್ಲಿ ಈ ಕ್ರಮ ಮಾಡಬೇಕು. ಅನಂತರ ಕೇಂದ್ರ ಸರಕಾರ ಕ್ರಮ ವಹಿಸಲು ಸಾಧ್ಯ ಎಂದರು ದೇವೇಂದ್ರ ಫಡ್ನವಿಸ್.
ಚುನಾವಣೆ ಸಂದರ್ಭದಲ್ಲಿ ಇಂಡಿಯಾ ಅಲೆಯನ್ಸ್ ಮಾಡಿಕೊಂಡವರು ತುಷ್ಟೀಕರಣಕ್ಕೆ ಒತ್ತು ನೀಡುತ್ತಿದ್ದಾರೆ. ಒಂದು ಸಮುದಾಯದ ಓಲೈಕೆ ಮಾಡುತ್ತಿದ್ದಾರೆ. ದೇಶದ ಜತೆ ಯಾರಿದ್ದಾರೆ ಮತ್ತು ದೇಶದ ವಿರುದ್ಧ ಯಾರಿದ್ದಾರೆ ಎಂಬುದನ್ನು ಚುನಾವಣೆ ಸಂದರ್ಭದಲ್ಲಿ ತಿಳಿದು ಮತ ಚಲಾಯಿಸಬೇಕು ಮತ್ತು ಭಾರತ ಗೆಲ್ಲಬೇಕು. –
ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ, ಮಹಾರಾಷ್ಟ್ರ
ಪ್ರಗತಿಶೀಲ ಭಾರತಕ್ಕೆ ಮೋದಿಯೇ ಗ್ಯಾರಂಟಿ
ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಗಳು ಯಾವು ದೂ ಪೂರ್ಣವಾಗಿಲ್ಲ. ಆದರೆ ಮೋದಿ ಗ್ಯಾರಂ ಟಿ ಕಾಂಗ್ರೆಸ್‌ನ ಗ್ಯಾರಂಟಿಯಂತಲ್ಲ. ಅದು ಗ್ಯಾರಂಟಿಗಳ ಗ್ಯಾರಂಟಿ. ಬಿಜೆಪಿಗೆ ಮತ ನೀಡುತ್ತಿದ್ದೇವೆ ಎನ್ನುವುದಕ್ಕಿಂತ ದೇಶಕ್ಕಾಗಿ ಮತ ಚಲಾಯಿಸುತ್ತೇವೆ ಎಂಬ ಅರಿವು ನಮ್ಮ ಲ್ಲಿರಬೇಕು ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.
ಸಂಘನಿಕೇತನದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಬೂತ್ ಕಾರ್ಯ ಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 2024ರ ಚುನಾವಣೆ ಇತಿಹಾಸ ನಿರ್ಮಿಸುವ ಚುನಾವಣೆ. ನಾವು 5 ವರ್ಷಕ್ಕೊಮ್ಮೆ ಸರಕಾರ ಗಳನ್ನು ಚುನಾಯಿಸುತ್ತೇವೆ. ಆದರೆ ಮೋದಿ 10 ವರ್ಷಗಳಲ್ಲಿ ನೂರು ವರ್ಷದ ಕೆಲಸ ಮಾಡಿ ತೋರಿಸಿದ್ದಾರೆ ಎಂದರು.
ಜಿ20 ಮುಖೇನ ಭಾರತದ ಶಕ್ತಿ ಜಗತ್ತಿಗೆ ಗೊತ್ತಾಗಿದೆ. ಕೇಂದ್ರದಿಂದ ನೀಡುವ ಒಂದು ರೂಪಾಯಿ ಕಟ್ಟ ಕಡೆಯ ಫಲಾನುಭವಿಗೆ ತಲುಪುವಾಗ 15 ಪೈಸೆ ಆಗಿರುತ್ತದೆ. ಉಳಿದ 85 ಪೈಸೆ ಭ್ರಷ್ಟಾಚಾರಿಗಳ ಪಾಲಾಗುತ್ತದೆ ಎಂದು ಪ್ರಧಾನಿ ರಾಜೀವ್ ಗಾಂ ಧಿ ಹೇಳಿದ್ದರು. ಆದರೆ ಈಗ ಕೇಂದ್ರ ಸರಕಾರ ನೀಡುವ ಒಂದು ರೂ. ಕೂಡ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿದೆ ಎಂದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ದೇಶ ವಿರೋ ಧಿಗಳಿಗೆ ಬೆಂಬಲ ನೀಡುತ್ತಿದೆ. ಪಾಕಿಸ್ಥಾನ ಪರ ಘೋಷಣೆ ಕೂಗುವವರನ್ನು ಬೆಂಬಲಿಸುವ ಸರಕಾರ ಇಲ್ಲಿದೆ. ಕಾಂಗ್ರೆಸ್ ಅ ಧಿಕಾರಕ್ಕೆ ಬಂದ ಅನಂತರ ದೇಶವಿರೋಧಿ ಗಳಿಗೆ ಬಲ ಬಂದಿದೆ ಎಂದ ಅವರು, ಇಲ್ಲಿ ನಮ್ಮ ಸರಕಾರ ಇಲ್ಲದಿದ್ದರೂ ಈ ಬಾರಿ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.
ದ.ಕ. ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾೖಕ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಸಹ ಉಸ್ತುವಾರಿ ನಿತಿನ್ ಕುಮಾರ್, ರಾಜ್ಯ ಕಾರ್ಯದರ್ಶಿ ಕ್ಯಾ| ಬೃಜೇಶ್ ಚೌಟ ಉಪಸ್ಥಿತರಿದ್ದರು.
ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಯತೀಶ್ ಅರುವಾರ್ ವಂದಿಸಿದರು.
ಪಿಕ್ಚರ್ ಅಭಿ ಬಾಕಿ ಹೇ!
ಹತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದದ್ದು ಟ್ರೇಲರ್ ಮಾತ್ರ. ಪಿಕ್ಚರ್ ಇನ್ನೂ ಬಾಕಿ ಇದೆ. 2029ರ ವರೆಗೂ ಮೋದಿಯೇ ರಾಷ್ಟ್ರದ ನಾಯಕ ಎಂದು ಫಡ್ನವಿಸ್ ಹೇಳಿದರು.
ಗೂಂಡಾಗಿರಿಯ ರಾಜಕಾರಣ ಮಾಡಿಲ್ಲ: ನಳಿನ್
“ನಾನು ಗೂಂಡಾಗಿರಿಯ ರಾಜಕಾರಣ ಮಾಡಿಲ್ಲ. ಭ್ರಷ್ಟಾಚಾರ ರಹಿತವಾಗಿ ಜನರ ಗೌರವಕ್ಕೆ ಚ್ಯುತಿ ಬಾರದಂತೆ ಸೇವೆ ಸಲ್ಲಿಸಿದ್ದೇನೆ. ಇದನ್ನು ನಾನು ಗಟ್ಟಿಯಾಗಿ ಹೇಳಬಲ್ಲೆ. ಕಳೆದ 10 ವರ್ಷದಲ್ಲಿ 1 ಲಕ್ಷ ಕೋ.ರೂ. ಅನುದಾನವನ್ನು ಪ್ರಧಾನಿ ಮೋದಿಯವರು ದ.ಕ. ಜಿಲ್ಲೆಗೆ ನೀಡಿದ್ದಾರೆ’ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.