Advertisement

CM Siddaramaiah ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

11:01 PM Jul 21, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು ತಾವು ಯಾವುದೇ ತನಿಖೆ ಎದರಿಸಲು ಸಿದ್ಧ ಎಂದು ಘೋಷಿಸಿದೆ. ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ.ಸುನೀಲ್‌ ಕುಮಾರ್‌, ಕೇಂದ್ರ ಸಚಿವ ವಿ. ಸೋಮಣ್ಣ ಸರಕಾರದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

Advertisement

ರವಿವಾರ ಸುದ್ದಿಗಾರರೊಂದಿಗೆ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರಕಾರ ಸಿಲುಕಿಕೊಂಡಿದ್ದು ಪೂರ್ಣ ತನಿಖೆಯಾದರೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ. ಸರಕಾರ ತನ್ನ ರಕ್ಷಣೆಗಾಗಿ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅವರು ಯಾವುದೇ ತನಿಖೆ ನಡೆಸಿದರೂ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಣ ಚುನಾವಣ ರಾಜಕಾರಣಕ್ಕೆ, ಸಾರಾಯಿ ಖರೀದಿಗೆ ಹೋಗಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಈ ಬಗ್ಗೆ ಪೂರ್ಣ ತನಿಖೆಯಾದರೆ ಸಿಎಂ ರಾಜೀನಾಮೆ ಕೊಡಬೇಕಾಗುತ್ತದೆ. ಹೀಗಾಗಿಯೇ ನಮ್ಮ ಅವಧಿಯಲ್ಲಿ 22 ಹಗರಣ ಆಗಿರುವುದಾಗಿ ಆರೋಪಿಸುತ್ತಿದ್ದಾರೆ ಎಂದರು.

ಅಧಿಕಾರಕ್ಕೆ ಬಂದು 1 ವರ್ಷಗಳ ನಂತರ ಬಹಳ ಕಷ್ಟಪಟ್ಟು ಬಿಜೆಪಿಯ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂಬುದನ್ನು ಈಗ ಕಣ್ಣು ತೆರೆದು ನೋಡುತ್ತಿದ್ದಾರೆ. ಸದನದಲ್ಲಿ ಆರೋಪ ಹೊರಿಸಿದ ಸಿಎಂ, ಅದಕ್ಕೆ ದಾಖಲೆಗಳನ್ನೂ ಕೊಡಬೇಕಿತ್ತು. ಈಗಲೂ ಅವರೇ ಅಧಿಕಾರದಲ್ಲಿದ್ದಾರೆ. ಯಾವುದೇ ತನಿಖೆ ನಡೆಸಲಿ ನಾವು ಎದುರಿಸಲು ಸಿದ್ಧರಿದ್ದೇವೆ. ಆದರೆ, ತನಿಖೆ ಹೆಸರಲ್ಲಿ ಅಧಿಕಾರ ದುರ್ಬಳಕೆ ಆಗಬಾರದು ಎಂದು ಒತ್ತಾಯಿಸಿದರು.

40 ಪರ್ಸೆಂಟ್‌ ಕಮಿಷನ್‌ ಆರೋಪ ಏನಾಯಿತು?
ನನ್ನ ವಿರುದ್ದ ಮಾಡಿರುವ ಆರೋಪದಲ್ಲಿ ನಾನು ಎಪಿಎಂಸಿ ಸಚಿವನಾಗಿರಲಿಲ್ಲ. ಆಗ ಗೃಹ ಸಚಿವನಾಗಿದ್ದೆ, ಎಪಿಎಂಸಿ ಪ್ರಕರಣದಲ್ಲಿ ತನಿಖೆ ನಡೆಸಿ ಬ್ಯಾಂಕಿನವರಿಂದ 48 ಕೋಟಿ ರೂ. ಜತೆಗೆ ಬಡ್ಡಿ ಸಮೇತ 52 ಕೋಟಿ ರೂ. ವಸೂಲಿ ಮಾಡಲಾಗಿತ್ತು. ಭೋವಿ ನಿಗಮದಲ್ಲಿ ಅವ್ಯವಹಾರ ಆಗಿದ್ದಾಗ ಅದನ್ನು ಸಿಐಡಿ ತನಿಖೆಗೆ ನಾವೇ ವಹಿಸಿದ್ದೇವೆ. ಅದರ ತನಿಖೆ ನಡೆಯುತ್ತಿದೆ.

Advertisement

ಗಂಗಾ ಕಲ್ಯಾಣ ಯೋಜನೆ ದುರುಪಯೋಗದ ಆರೋಪ ಕೇಳಿ ಬಂದಾಗ ನಾನೇ ಸದನದಲ್ಲಿ ಸಿಐಡಿ ತನಿಖೆಗೆ ನೀಡಿದ್ದೇನೆ. ಅದರ ತನಿಖೆ ಕೊನೇ ಹಂತಕ್ಕೆ ಬಂದಿದೆ. ನಮ್ಮ ವಿರುದ್ಧ ಶೇ.40 ಆರೋಪವನ್ನು ಮಾಡಿದ್ದರು. ಇದವರೆಗೂ ಯಾವುದೇ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ನೋಟಿಸ್‌ ಕೊಟ್ಟಿಲ್ಲ. ರಾಜಕೀಯ ಉದ್ದೇಶದಿಂದ ಆಯೋಗ ಮಾಡಿದರೆ, ತನಿಖೆ ನಡೆಸಿದರೆ ಹೀಗೆಯೇ ಆಗುವುದು ಎಂದು ತಿರುಗೇಟು ನೀಡಿದರು.

“ಶಿಗ್ಗಾಂವಿ ಸೇರಿದಂತೆ ಉಪಚುನಾವಣೆಗೆ ನಾವು ಸಿದ್ಧರಿದ್ದೇವೆ. ನನ್ನ ಮಗನನ್ನು ಅಭ್ಯರ್ಥಿ ಮಾಡುವಂತೆ ಯಾರೂ ಕೇಳಿಲ್ಲ. ವಿಧಾನ ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ ಸಮರ್ಥರು ಹೆಚ್ಚಿಗೆ ಇರುವುದರಿಂದ ವಿಳಂಬವಾಗಿದೆ. ತೀರ್ಮಾನ ಆಗಲಿದೆ.” – ಬಸವರಾಜ ಬೊಮ್ಮಾಯಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next