ಫಿರೋಜಾಬಾದ್/ಉತ್ತರಪ್ರದೇಶ: ಮೂರು ಬೈಕ್ ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಸ್ಥಳೀಯ ಬಿಜೆಪಿ ಮುಖಂಡನನ್ನು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಸ್ಥಳೀಯ ಬಿಜೆಪಿ ಮುಖಂಡ ದಯಾಶಂಕರ್ ಗುಪ್ತಾ ಅವರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಸಹೋದ್ಯೋಗಿಗಳಾದ ವಿರೇಶ್ ಟೋಮರ್, ನರೇಂದ್ರ ಟೋಮರ್ ಮತ್ತು ದೇವೇಂದ್ರ ಟೋಮರ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ದಯಾಶಂಕರ್ ಕುಟುಂಬ ಸಂಶಯ ವ್ಯಕ್ತಪಡಿಸಿ ಮೂವರು ಹೆಸರನ್ನು ಉಲ್ಲೇಖಿಸಿ ದೂರು ನೀಡಿದ್ದ ನಂತರ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಯಾಶಂಕರ್ ಗುಪ್ತಾ ಮಂಡಲ್ ಉಪಾಧ್ಯಕ್ಷರಾಗಿದ್ದಾರೆ. ತಮ್ಮ ಅಂಗಡಿಯನ್ನು ಬಂದ್ ಮಾಡಿ ಕಳೆದ ರಾತ್ರಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸ್ಥಳೀಯ ಮಾರ್ಕೆಟ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ವಿರೇಶ್ ಟೋಮರ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ. ಆದರೆ ದಯಾಶಂಕರ್ ಗುಪ್ತಾ ಇದರಿಂದ ಅಸಮಾಧಾನಗೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಫೇಸ್ ಬುಕ್ ಖಾತೆಯಲ್ಲಿ ವಿರೇಶ್ ಮತ್ತು ದಯಾಶಂಕರ್ ನಡುವೆ ಜಟಾಪಟಿ ನಡೆದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.