Advertisement

ಎಲ್ಲರೂ ಸೇರಿ ನನ್ನನ್ನು ‘ಬೆಂಗಳೂರಿನ ಬೋರೇಗೌಡ’ ಮಾಡಿಬಿಟ್ಟಿದ್ದಾರೆ!

09:09 AM Apr 09, 2019 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎರಡನೇ ತಲೆಮಾರಿನ ನಾಯಕರ ಪೈಕಿ ಆಯಕಟ್ಟಿನ ಸ್ಥಾನಾಕಾಂಕ್ಷಿ ನಾಯಕರಲ್ಲಿ ಪ್ರಮುಖರಾಗಿ ಗುರುತಿಸಲ್ಪಡುತ್ತಿರುವ ಮಾಜೀ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್‌. ಅಶೋಕ್‌ ಅವರು ತಮಗಿರುವ ರಾಜಕೀಯ ಮಹತ್ವಾಕಾಂಕ್ಷೆಯ ಕುರಿತಾಗಿ ಇಂದು ಮಾಧ್ಯಮ ಸಂವಾದ ಒಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

Advertisement

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂಬ ಮಾತನ್ನು ಅಶೋಕ್‌ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ನಾನು ಬೆಂಗಳೂರಿನಲ್ಲಿ ಹುಟ್ಟಿಬೆಳೆದವನಾಗಿರಬಹುದು ಆದರೆ ನನ್ನನ್ನು ಬೆಂಗಳೂರು ನಗರಕ್ಕೆ ಸೀಮಿತವಾಗಿರುವ ನಾಯಕನೆಂದು ಯಾರಾದರೂ ಅಂದುಕೊಂಡಿದ್ದರೆ ಅದು ಅವರ ತಪ್ಪು ಕಲ್ಪನೆಯಷ್ಟೇ. ನನಗೂ ರಾಜ್ಯಮಟ್ಟದ ನಾಯಕನಾಗುವ ಅರ್ಹತೆ ಮತ್ತು ಆಕಾಂಕ್ಷೆ ಎರಡೂ ಇದೆ ಎಂದು ಹೇಳುವ ಮೂಲಕ ತನ್ನ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನೂ ಕೂಡಾ ಒಬ್ಬ ಪ್ರಬಲ ಆಕಾಂಕ್ಷಿ ಎಂಬುದನ್ನು ಅಶೋಕ್‌ ಅವರು ಪಕ್ಷ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಿದರು. ಪಕ್ಷದಲ್ಲಿ ಎಲ್ಲರೂ ಸೇರಿ ನನ್ನನ್ನು ‘ಬೆಂಗಳೂರು ಬೋರೇಬೌಡ’ನನ್ನಾಗಿ ಮಾಡಿದ್ದಾರೆ. ಆದರೆ ನನ್ನ ದೃಷ್ಟಿ ರಾಜ್ಯಮಟ್ಟದಲ್ಲಿದೆ ಹಾಗೆಂದುಕೊಂಡು ನಾನೇನೂ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಟವಲ್‌ ಹಾಕಿಕೊಂಡು ಕುಳಿತಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕಳೆದ ಡಿಸಂಬರ್ ತಿಂಗಳಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗಬೇಕಿತ್ತು. ಆದರೆ ಲೋಕಸಭಾ ಚುನಾವಣೆಯ ಕಾರಣದಿಂದ ಈ ಪ್ರಕ್ರಿಯೆ ಮುಂದಕ್ಕೆ ಹೋಗಿದೆ. ನಾನೇನು ಸನ್ಯಾಸಿಯಲ್ಲ ಅವಕಾಶ ಸಿಕ್ಕರೆ ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿಯಲೂ ನಾನು ರೆಡಿ ಎಂದು ಅಶೋಕ್‌ ಸಾರಿದರು. ಒಟ್ಟಿನಲ್ಲಿ ಬಿ.ಎಸ್‌. ಯಡಿಯೂರಪ್ಪ, ಈಶ್ವರಪ್ಪ, ಸುರೇಶ್‌ ಕುಮಾರ್‌, ಜಗದೀಶ್‌ ಶೆಟ್ಟರ್‌ ಮುಂತಾದ ಮುಂಚೂಣಿ ಕಮಲ ನಾಯಕರ ಬಳಿಕ ರಾಜ್ಯ ಬಿಜೆಪಿಯನ್ನು ಮುನ್ನಡೆಸಿಕೊಂಡು ಹೋಗಬಲ್ಲ ಹೊಸತಲೆಮಾರಿನ ನಾಯಕರಲ್ಲಿ ಆರ್‌. ಅಶೋಕ್‌ ಅವರ ಹೆಸರು ಮುಂಚೂಣಿಯಲ್ಲಿರುವುದು ಅವರ ಹೆಳಿಕೆಗೆ ಇನ್ನಷ್ಟು ಪುಷ್ಠಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next