ನವದೆಹಲಿ: ಭಾರತೀಯ ಜನತಾ ಪಕ್ಷದ ಮುಖಂಡ ಜೀತು ಚೌಧರಿಯನ್ನು ಅವರ ಮನೆಯ ಹೊರಭಾಗದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ಬುಧವಾರ (ಏಪ್ರಿಲ್ 20) ನಡೆದಿದೆ.
ಇದನ್ನೂ ಓದಿ:ಭಾರತದಲ್ಲಿ 2,380 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ
ಮಯೂರ್ ವಿಹಾರ್ ಪ್ರದೇಶದಲ್ಲಿ ಜೀತು ಚೌಧರಿಯ ಮೇಲೆ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದಾರಿ ಮಧ್ಯದಲ್ಲಿಯೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿ ಹೇಳಿದೆ.
ಪೊಲೀಸರ ಮಾಹಿತಿ ಪ್ರಕಾರ, ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿರುವ ಮನೆಯ ಹೊರಭಾಗದಲ್ಲಿ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ಗಮನಿಸಿದ್ದರು. ಈ ವ್ಯಕ್ತಿಯನ್ನು ಜಿತೇಂದ್ರ ಅಲಿಯಾಸ್ ಜೀತು ಚೌಧರಿ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಕೆಲವು ಮಹತ್ವದ ದಾಖಲೆಯನ್ನು ಕಲೆ ಹಾಕಲಾಗಿದೆ. ಪ್ರಕರಣದ ಕುರಿತು ಪೊಲೀಸರು ಪ್ರತ್ಯಕ್ಷದರ್ಶಿಗಳ ಸಾಕ್ಷಿ ಮತ್ತು ಸಿಸಿಟಿವಿ ಫೂಟೇಜ್ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.