ಒಡಿಶಾ: ಒಡಿಶಾದ ಸಂಬಾಲ್‌ಪುರದಲ್ಲಿ ನಡೆಯುತ್ತಿದ್ದ ಬಿಜೆಪಿ ಪಕ್ಷದ ಪ್ರತಿಭಟನೆಯಲ್ಲಿ ಬಿಜೆಪಿಯ ಮುಖಂಡ ಜಯನಾರಾಯಣ್ ಮಿಶ್ರಾ, ಸ್ಥಳೀಯ ಮಹಿಳಾ ಪೊಲಿಸ್ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿದ್ದಾರೆ. ನಿನ್ನ ಕೆನ್ನಗೆ ಬಾರಿಸುತ್ತೇನೆ ಎಂದ ಬಿಜೆಪಿ ನಾಯಕನ ಮಾತುಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ.
ಆದರೆ ಒಡಿಶಾದ ಬಿಜೆಪಿ ಮುಖಂಡ, ಒಡಿಶಾ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಜಯನಾರಾಯಣ್ ಮಿಶ್ರಾ, ಈ ಆರೋಪವನ್ನು ತಳ್ಳಿ ಹಾಕಿದ್ದು, ಧನುಪುಲಿ ಪೋಲಿಸ್ ಇನ್ಸ್ಪೆಕ್ಟರ್, ಅನಿತಾ ಪ್ರಾಧಾನ್ ಅವರೇ ತಮ್ಮನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.
ಪೋಲಿಸರು ನಮ್ಮ ಮಹಿಳಾ ಕಾರ್ಯಕರ್ತೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಹಾಗಾಗಿ ನಾನು ಪೋಲಿಸರ ಬಳಿ ತೆರಳಿ ವಿಚಾರಿಸಿದ್ದೆ. ಆಗ ಅಧಿಕಾರಿಯೊಬ್ಬರು ನನ್ನ ಕಾಲಿಗೆ ಒದ್ದರು. ನಾನು ಬ್ಯಾರಿಕೆಡ್ ದಾಟಿಲ್ಲ. ಆದರೂ ನಾನು ಹೇಗೆ ಬಯ್ಯಲು ಸಾಧ್ಯ ಎಂದು ಮಿಶ್ರಾ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಬಾಲ್‌ಪುರ್ ಪೋಲಿಸ್ ವರಿಷ್ಠಾಧಿಕಾರಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಸದ್ಯಕ್ಕೆ ಜಯನಾರಾಯಣ್ ಮಿಶ್ರಾ ಅವರು ಮಹಿಳಾ ಅಧಿಕಾರಿಗೆ ಬೈಯ್ಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಿನ್ನ ಕೆನ್ನೆಗೆ ಹೊಡೆಯುತ್ತೇನೆ ಎಂದು ಅವರು ಹೇಳುತ್ತಿರುವುದೂ ಕೇಳಿದೆ. ಜಯನಾರಾಯಣ್ ಮಿಶ್ರಾ ಅವರ ಈ ದುಂಡಾ ವರ್ತನೆಗೆ ವಿಪಕ್ಷಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ.