ಮಸ್ಕಿ: ಆರಂಭದಿಂದಲೂ ಪ್ರಚಾರದಲ್ಲಿ ಅಬ್ಬರಿಸಿದ್ದ ಬಿಜೆಪಿ ನಾಯಕರು ಕೊನೆಯ ದಿನಗಳಲ್ಲಿ ಮಂಕಾಗಿದ್ದಾರೆ. ವಿಶೇಷವಾಗಿ ಕೊರೊನಾ ಹೊಡೆತಕ್ಕೆ ಹಲವು ನಾಯಕರು ಐಸೋಲೇಷನ್ ಗೆ ಒಳಗಾಗಿದ್ದು, ಇತ್ತ ಕಾಂಗ್ರೆಸ್‌ನ ದಿಗ್ಗಜರು ಮಸ್ಕಿ ಅಖಾಡಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಿದ್ದ ಇಲ್ಲಿನ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬಿಜೆಪಿ ಸರಕಾರ ರಚನೆಯಲ್ಲಿ ಪಾತ್ರ ವಹಿಸಿದ್ದ 17 ಜನ ಶಾಸಕರಲ್ಲಿ ಒಬ್ಬರಾಗಿದ್ದರು. ಇದೇ ಕಾರಣಕ್ಕೆ ಬಿಜೆಪಿಯ ವರಿಷ್ಠರು ಪ್ರತಾಪಗೌಡ ಪಾಟೀಲ್ ಅವರನ್ನು ಗೆಲ್ಲಿಸಬೇಕು ಎನ್ನುವ ಹಠದೊಂದಿಗೆ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್ ಕೂಡ ಪಕ್ಷದ ಚಿಹ್ನೆಯಡಿ ಗೆದ್ದು ಕೆಲವೇ ದಿನಗಳಲ್ಲಿ ಪ್ರತಾಪಗೌಡ ರಾಜೀನಾಮೆ ಸಲ್ಲಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎನ್ನುವ ಆಕ್ರೋಶದಲ್ಲಿ ಉಪಚುನಾವಣೆ ಕಣಕ್ಕೆ ಇಳಿದಿತ್ತು. ಉಪಚುನಾವಣೆ ಘೋಷಣೆಯ ಮರು ದಿನದಿಂದಲೇ ಅಬ್ಬರದ ಪ್ರಚಾರ ಎರಡು ಪಕ್ಷಗಳಿಂದ ನಡೆದಿತ್ತು. ವಿಶೇಷವಾಗಿ ಹಾಲಿ ಸರಕಾರವಿರುವ ಬಿಜೆಪಿಯಿಂದ ಘಟಾನುಘಟಿ ನಾಯಕರೇ ದಂಡೆತ್ತಿ ಬಂದಿದ್ದರು. ಸಿಎಂ ಪುತ್ರ ಬಿ.ವೈ. ವಿಜಯೇಂದ್ರ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಚುನಾವಣೆ ಉಸ್ತುವಾರಿ ಹೊತ್ತು ಹಲವು ಕೋನಗಳಲ್ಲಿ ಮತ ಸೆಳೆಯುವ ಪ್ರಯತ್ನ ಮಾಡಿದ್ದರು.
ಅಲ್ಲದೇ ಸ್ವತಃ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿ 10-12 ಜನ ಸಚಿವರು, ಶಾಸಕರು, ಮಾಜಿ ಶಾಸಕರು ಆಗಮಿಸಿ ಉಪಚುನಾವಣೆ ಕಣದಲ್ಲಿ ಧೂಳೆಬ್ಬಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಪ್ರತಿ ದಾಳ ಉರುಳಿಸಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಲೋಕಸಭೆ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಕಾಂಗ್ರೆಸ್ ಪರವಾಗಿ ಕ್ಯಾಂಪೇನ್ ಗೆ ಇಳಿದಿದ್ದರು. ಎರಡು ಪಕ್ಷದ ವರಿಷ್ಠರ ಪ್ರವೇಶದಿಂದ ಮಸ್ಕಿ ಅಖಾಡ ರಣಕಣವಾಗಿ ಮಾರ್ಪಟ್ಟಿತ್ತು. ಆದರೆ ಮತದಾನಕ್ಕೆ ಇನ್ನೂ ಮೂರು ದಿನ ಬಾಕಿ ಇರುವಾಗಲೇ ಕಣ ಚಿತ್ರಣ ಅದಲು-ಬದಲಾಗಿದೆ.
ಕೊರೊನಾ ಹೊಡೆತ: ಮಸ್ಕಿಯಲ್ಲಿ ಪ್ರಚಾರದ ಅಖಾಡಕ್ಕೆ ಇಳಿದ ಬಿಜೆಪಿಯ ಬಹುತೇಕ ನಾಯಕರು ಕೋವಿಡ್-19 ಪಾಸಿಟಿವ್‌ಗೆ ತತ್ತರಿಸಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮೊದಲು ಕೊರೊನಾ ಪಾಸಿಟಿವ್ ಗೆ ಒಳಗಾದರೆ, ಇದರ ಬೆನ್ನ ಹಿಂದೆಯೇ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ಗೆ ಕೊರೊನಾ ಸೋಂಕು ತಗುಲಿ ಐಸೋಲೇಶನ್‌ಗೆ ಒಳಗಾದರು. ಈ ಎರಡು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ಮುಖಂಡ, ಬಿ.ವೈ. ವಿಜಯೇಂದ್ರ ಅವರ ಆಪ್ತ ತಮ್ಮೇಶಗೌಡ, ಸುರುಪುರ ಶಾಸಕ ರಾಜುಗೌಡಗೂ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದೆ. ಜತೆಗೆ ವಿಜಯೇಂದ್ರ ಗನ್ ಮ್ಯಾನ್‌ಗಳು, ವಿಜಯೇಂದ್ರ ವಾಸ್ತವ್ಯ ಹೂಡಿದ್ದ ಮುದಗಲ್ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಮತ್ತಿಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಖಾಲಿ-ಖಾಲಿ: ಬಿಜೆಪಿ ಮುಖಂಡರಿಗೆ ಸಾಲು -ಸಾಲಾಗಿ ಕೋವಿಡ್-19 ಪಾಸಿಟಿವ್ ಪತ್ತೆ ಆಗುತ್ತಿದ್ದಂತೆಯೇ ಬಹುತೇಕ ಮುಖಂಡರು ಬಹಿರಂಗ ಪ್ರಚಾರ ಕೊನೆಯಾಗುವ ಮುನ್ನವೇ ಮಸ್ಕಿ ಅಖಾಡದಿಂದ ಕಾಲ್ಕಿತ್ತಿದ್ದಾರೆ. ಬಿಜೆಪಿಯ ಆರೆಂಟು ನಾಯಕರಿಗೆ ಕೋವಿಡ್-19 ಬಂದಿದ್ದು ಎಲ್ಲೆಡೆ ಆತಂಕ ಉಂಟು ಮಾಡಿದೆ. ಹೀಗಾಗಿ ವಿಜಯೇಂದ್ರ ವಾಸ್ತವ್ಯ ಹೂಡಿದ್ದ ನಿವಾಸ ಸೇರಿ ಮುದಗಲ್, ಮಸ್ಕಿ, ಸಿಂಧನೂರಿನ ಲಾಡ್ಜ್ನಲ್ಲಿ ತಂಗಿದ್ದ ಬಹುತೇಕ ಬಿಜೆಪಿ ಮುಖಂಡರು ಸ್ವ ಊರಿಗೆ ತೆರಳಿದ್ದಾರೆ.
ಎಂಟ್ರಿ ಕೊಟ್ಟ ಡಿಕೆಶಿ
ಕೊರೊನಾ ಸೇರಿ ಪ್ರಚಾರದ ಧಣಿವಿನಿಂದ ತತ್ತರಿಸಿದ ಬಿಜೆಪಿ ಮುಖಂಡರು ಮಸ್ಕಿ ಖಾಲಿ ಮಾಡಿದರೆ ಇತ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತ್ಯಕ್ಷವಾಗಿದ್ದು, ಹೊಸ ತಿರುವು ಮೂಡಿಸಿದೆ. ಪ್ರಚಾರಕ್ಕೆ ಮೂರ್‍ನಾಲ್ಕು ಬಾರಿ ಆಗಮಿಸಿದರೂ ಒಂದು ದಿನ ವಾಸ್ತವ್ಯ ಹೂಡದ ಡಿ.ಕೆ. ಶಿವಕುಮಾರ್ ಎ.14ರಂದು ಇಲ್ಲಿಯೇ ವಾಸ್ತವ್ಯ ಹೂಡುವ ನಿರ್ಧಾರ ಮಾಡಿದ್ದು, ಬುಧವಾರವಿಡೀ ಮಸ್ಕಿ ಕಾಂಗ್ರೆಸ್ ಮುಖಂಡರ ಜತೆ ಸರಣಿ ಸಭೆ ನಡೆಸಿದ್ದಾರೆ. ಈ ಮೂಲಕ ಕೊನೆ ಹಂತದ ಕಾರ್ಯತಂತ್ರ ರೂಪಿಸಿದ್ದಾರೆ. ಇತ್ತ ಬಿಜೆಪಿ ಮಾತ್ರ ಪ್ರಚಾರದ ಅಖಾಡದಿಂದ ದೂರ ಸರಿಯುತ್ತಿರುವುದು ಹಲವು ರೀತಿಯ ಅಚ್ಚರಿ-ಅನುಮಾನಗಳಿಗೆ ಕಾರಣವಾಗಿದೆ.
*ಮಲ್ಲಿಕಾರ್ಜುನ ಚಿಲ್ಕರಾಗಿ