ನವದೆಹಲಿ: ಪಶ್ಚಿಮ ಬಂಗಾಳದ ಬೋಲ್ಪುರದ ಮಾಜಿ ಸಂಸದ ಅನುಪಮ್ ಹಜ್ರಾ ಅವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸೂಚನೆ ಮೇರೆಗೆ ಹಜ್ರಾ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದು. ಇತ್ತೀಚೆಗೆ ಅನುಪಮ್ ಹಜ್ರಾ ಅವರು ಪಕ್ಷ ವಿರೋಧಿ ಹೇಳಿಕೆ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೋಲ್ಕತ್ತಾ ಪ್ರವಾಸದಲ್ಲಿದ್ದಾಗಲೇ ಹಜ್ರಾ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿತ್ತು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ನೋಟಿಸ್ ಜಾರಿ ಮಾಡಿದ್ದು, “ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಸೂಚನೆಯಂತೆ ಅನುಪಮ್ ಹಜ್ರಾ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡಲಾಗಿದೆ. ಈ ಮಾಹಿತಿಯು ತಕ್ಷಣದಿಂದ ಜಾರಿಗೆ ಬರಲಿದೆ” ಎಂದು ಬರೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಂಗಳವಾರ ಕೋಲ್ಕತ್ತಾಗೆ ಆಗಮಿಸಿ ಬಂಗಾಳದಲ್ಲಿ ಚುನಾವಣಾ ಸಿದ್ಧತೆಯನ್ನು ಚುರುಕುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ, ಪಕ್ಷದ ನಾಯಕರೊಂದಿಗಿನ ಸಭೆಯ ನಂತರ, ಅನುಪಮ್ ಹಜ್ರಾ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಯಿತು. ಇದಕ್ಕೂ ಮುನ್ನ ಅನುಪಮ್ ಹಜ್ರಾ ಅವರಿಗೆ ನೀಡಲಾಗಿದ್ದ ಕೇಂದ್ರ ಭದ್ರತೆಯನ್ನೂ ಕೆಲ ದಿನಗಳ ಹಿಂದೆ ತೆಗೆದುಹಾಕಲಾಗಿತ್ತು.
ಅನುಪಮ್ ಹಜ್ರಾ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು ಮತ್ತು ಬೋಲ್ಪುರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, 2019ರ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಅನುಪಮ್ ಹಜ್ರಾ ಅವರನ್ನು ಪಶ್ಚಿಮ ಬಂಗಾಳದ ಪರಿಶಿಷ್ಟ ಜಾತಿಗಳ ಯುವ ಮುಖ ಎಂದು ಬಿಜೆಪಿ ಬಿಂಬಿಸಿತ್ತು, ನಂತರ ಅವರನ್ನು 2020 ರಲ್ಲಿ ಮೊದಲ ಬಾರಿಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಾಡಲಾಯಿತು. ಈ ಅವಧಿಯಲ್ಲಿ ಬಿಹಾರದ ಸಹ ಪ್ರಭಾರಿ ಹೊಣೆಗಾರಿಕೆಯೂ ಸಿಕ್ಕಿದೆ. 2023ರಲ್ಲೂ ಅವರಿಗೆ ಅದೇ ಜವಾಬ್ದಾರಿ ನೀಡಲಾಗಿತ್ತು, ಆದರೆ ಅವರ ಪಕ್ಷ ವಿರೋಧಿ ಹೇಳಿಕೆಗಳಿಂದಾಗಿ ಅವರು ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಇದೀಗ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Israel ರಾಯಭಾರ ಕಚೇರಿ ಬಳಿ ಸ್ಫೋಟ: ಸ್ಥಳದಲ್ಲಿ ಇಸ್ರೇಲ್ ಧ್ವಜದಿಂದ ಸುತ್ತಿದ ಪತ್ರ ಪತ್ತೆ