ಹೊಸದಿಲ್ಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸಂಸದ ಚರಣ್ ಜಿತ್ ಸಿಂಗ್ ಚನ್ನಿ ಅವರು ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಮತ್ತು ಖದೂರ್ ಸಾಹಿಬ್‌ನ ಪಕ್ಷೇತರ ಸಂಸದ ಅಮೃತಪಾಲ್ ಸಿಂಗ್ ಅವರ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಕೇಂದ್ರ ಸರಕಾರವನ್ನು ಟೀಕಿಸಿದ ಚನ್ನಿ “ಅವರು ಪ್ರತಿದಿನ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಇಂದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಪಂಜಾಬ್‌ನಲ್ಲಿ 20 ಲಕ್ಷ ಜನರಿಂದ ಸಂಸದರಾಗಿ ಆಯ್ಕೆಯಾದ ವ್ಯಕ್ತಿ ಹಿಂದೆ ಬಿದ್ದಿರುವುದು ತುರ್ತು ಪರಿಸ್ಥಿತಿಯಾಗಿದೆ. NSA ಅಡಿಯಲ್ಲಿ ಅವರು ತಮ್ಮ ಕ್ಷೇತ್ರದ ಜನರ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ಸಾಧ್ಯವಿಲ್ಲ, ಇದು ಕೂಡ ತುರ್ತು ಪರಿಸ್ಥಿತಿಯಾಗಿದೆ’ ಎಂದರು.
ಲೋಕಸಭೆಯಲ್ಲೇ ಚನ್ನಿ ಜತೆ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ರವನೀತ್ ಸಿಂಗ್ ಬಿಟ್ಟು ‘ಚನ್ನಿ ದೇಶದ್ರೋಹಿಯಂತೆ ವರ್ತಿಸುತ್ತಿದ್ದಾರೆ’ ಎಂದು ಕಿಡಿ ಕಾರಿದರು. ಬಿಜೆಪಿ ಸಂಸದ ದಿನೇಶ್ ಶರ್ಮ ‘ಚನ್ನಿ ಭಯೋತ್ಪಾದಕರ ಬೆಂಬಲವಾಗಿ ಮಾತನಾಡಿದ್ದು, ಕಾಂಗ್ರೆಸ್ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಿಡಿ ಕಾರಿದರು.
ಚನ್ನಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ‘ಅಮೃತಪಾಲ್ ಸಿಂಗ್‌ಗೆ ಸಂಬಂಧಿಸಿದ ವಿಚಾರ ನ್ಯಾಯಾಲಯದಲ್ಲಿದೆ. ಅಮೃತಪಾಲ್ ಸಿಂಗ್ ವಿರುದ್ಧ ಗಂಭೀರ ಆರೋಪಗಳಿವೆ. ಸಂಸತ್ತಿನಲ್ಲಿ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ಇದು ಜನರ ಮುಂದಿದೆ, ಕಾಂಗ್ರೆಸ್ ಏನು ಮಾಡಿದೆ ಎಂದು ಚರಣ್ ಜಿತ್ ಸಿಂಗ್ ಚನ್ನಿ ತುರ್ತು ಪರಿಸ್ಥಿತಿಯಲ್ಲಿ ಇರಲಿಲ್ಲ. ಅಂದಿನ ಸ್ಥಿತಿ ಏನೆಂದು ಅವರಿಗೆ ತಿಳಿದಿರಲಿಲ್ಲ, ಅವರು ಪ್ರಧಾನಿಯವರ ಮೇಲೆ ಟೀಕೆ ಮಾಡುತ್ತಾರೆ, ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿಯವರ ಮೇಲೆ ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯವೇ? ಅವರು ಪ್ರಶ್ನಿಸಿದರು.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಕಿಡಿ ಕಾರಿ ‘ಖಲಿಸ್ಥಾನ್ ಪರವಾದ ಅಂಶಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ’ ಎಂದು ಆರೋಪಿಸಿದರು.
ಅಮೃತಪಾಲ್ ಸಿಂಗ್ ಅವರನ್ನು ಕಳೆದ ವರ್ಷ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಒಂಬತ್ತು ಸಹಚರರೊಂದಿಗೆ ಬಂಧಿಸಲಾಗಿತ್ತು.
ಪಂಜಾಬ್ ಮುಖ್ಯಮಂತ್ರಿ ಮತ್ತು ಆಪ್ ನಾಯಕ ಭಗವಂತ್ ಮಾನ್ ಅವರು ಚನ್ನಿ ಹೇಳಿಕೆಯಿಂದ ದೂರ ಉಳಿದಿದ್ದಾರೆ.