ಔರಾದ (ಬೀದರ್): ಭ್ರಷ್ಟಾಚಾರದಲ್ಲಿ ತೊಡಗಿ ಕರ್ನಾಟವನ್ನು ದಿವಾಳಿಯಂಚಿಗೆ ತಂದಿರುವ ಕಾಂಗ್ರೆಸ್ ಪಕ್ಷವನ್ನು ಲೋಕಸಭೆ ಚುನಾವಣೆಯಲ್ಲಿ ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕರೆ ನೀಡಿದರು.
ಔರಾದ ಪಟ್ಟಣದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಅಪ್ರಚಾರ ಮಾಡುತ್ತ ಹೊರಟಿದೆ. ಮತದಾರ ಸಮೀಪಿಸಿದರೂ ಆ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿಗೆ ಘೋಷಿಸಲು ಸಾಧ್ಯವಾಗಿಲ್ಲ. ಪ್ರಧಾನಿ ಮೋದಿ ಅವರನ್ನು ಹೋಲುವಂಥ ಯಾವುದೇ ವ್ಯಕ್ತಿಯೇ ಕಾಂಗ್ರೆಸ್ಸಿನಲ್ಲಿ ಇಲ್ಲ ಎಂದು ಲೇವಡಿ ಮಾಡಿದರು.
ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸಕಾರ ಸಬ್ ಕಾ ಸಾತ್- ಸಬ್‌ಕಾ ವಿಕಾಸ್ ಧೇಯೋದ್ದೆಶದೊಂದಿಗೆ ಜನಪರ ಆಡಳತ ನೀಡಿದೆ. ಒಂದು ದಿನವೂ ವಿಶ್ರಾಂತಿ ಪಡೆಯದೇ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಮೋದಿ ಅವರೆ ನಮಗೆಲ್ಲ ಆದರ್ಶವಾಗಿದ್ದಾರೆ ಎಂದು ಹೇಳಿದ ಯಡಿಯೂರಪ್ಪ, ರಾಜ್ಯಾದ್ಯಂತ ಪ್ರವಾಸ ಮಾಡಿ ವಾಸ್ತವಿಕ ಸ್ಥಿತಿ ಅವಲೋಕಿಸಿದ್ದು, ಎಲ್ಲ ೨೮ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ಗೆಲುವನ್ನು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದರು.
ಮತ್ತೊಮ್ಮೆ ಖೂಬಾ ಸಚಿವ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಮತ್ತೊಮ್ಮೆ ಗೆದ್ದು ಸಂಸದರಷ್ಟೇ ಅಲ್ಲ, ಕೇಂದ್ರ ಸಂಪುಟದಲ್ಲಿ ಸಚಿವರೂ ಆಗಲಿದ್ದಾರೆ. ಪ್ರತಿ ಬೂತ್‌ಗಳನ್ನು ಬಲಪಡಿಸುವ ಮೂಲಕ ಖೂಬಾ ಅವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಶ್ರಮಿಸಬೇಕು. ದಿ. ಗುರುಪಾದಪ್ಪ ನಾಗಮಾರಪಳ್ಳಿ ದೊಡ್ಡ ವ್ಯಕ್ತಿ. ಅವರ ಕುಟುಂಬ ಸೇರಿ ಎಲ್ಲರ ಸಹಕಾರದಿಂದ ಗೆಲುವು ಪಡೆಯಬೇಕು ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮಹಾರಾಷ್ಟ್ರದ ಶಾಸಕ ಸಂಭಾಜಿ ಪಾಟೀಲ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಅವಿನಾಶ ಜಾಧವ್, ಡಾ. ಸಿದ್ದು ಪಾಟೀಲ, ಮುಖಂಡರಾದ ಉಮಾಕಾಂತ ನಾಗಮಾರಪಳ್ಳಿ, ಸೂರ್ಯಕಾಂತ ನಾಗಮಾರಪಳ್ಳಿ, ರಾಜೇಶ್ವರ ನಿಟ್ಟೂರೆ, ರಮೇಶ ಪಾಟೀಲ, ಕಿರಣ ಪಾಟೀಲ, ಅರಹಂತ್ ಸಾವಳೆ, ಡಿ.ಕೆ ಸಿದ್ರಾಮ್, ರಾಮಶೆಟ್ಟಿ ಪನ್ನಾಳೆ ಮತ್ತಿತರರು ಇದ್ದರು.