ಮೈಸೂರು: ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಹುನ್ನಾರ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಿ ಬಹುಮತದಿಂದ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕೆಂದು ಸಚಿವ ಡಾ.ಎಚ್.ಸಿ.ಮಹದೇವಪ್ಪಹೇಳಿದರು.
ನಗರದ ದಟ್ಟಗಳ್ಳಿಯ ಕನಕದಾಸನಗರದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸಿದ್ದರಾಮಯ್ಯ ವಿರುದ್ಧ ನೇರವಾಗಿ ದಾಳಿ ಮಾಡುತ್ತಿರುವುದನ್ನು ನೋಡಿದರೆ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕೆಂಬ ಹುನ್ನಾರ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಎರಡೂ ಪಕ್ಷಗಳು ಒಳಒಪ್ಪಂದ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದು, ಸ್ವಾಯತ್ತ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಂಡು ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಯಾವುದೇ ಒಳಒಪ್ಪಂದ, ಹೊಂದಾಣಿಕೆ ಮಾಡಿಕೊಂಡಿದ್ದರೂ ಅವರ ಆಟ ನಡೆಯಲ್ಲ. ಆದ್ದರಿಂದ ಕಾರ್ಯಕರ್ತರು ತಮ್ಮಲ್ಲಿರುವ ವೈಮನಸ್ಸು, ಭಿನ್ನಾಭಿಪ್ರಾಯವನ್ನು ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಿ, ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕು ಎಂದರು.
ಈ ಚುನಾವಣೆ ದಿಕ್ಸೂಚಿ: ಈ ಬಾರಿಯ ವಿಧಾನಸಭಾ ಚುನಾವಣೆ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಈ ಚುನಾವಣೆಯ ಫಲಿತಾಂಶ ದೇಶದ ಗಮನ ಸೆಳೆಯಲಿದೆ. ಹೀಗಾಗಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.
ಇಡೀ ರಾಜ್ಯ ಸುತ್ತಾಡಿ ಅಧಿಕಾರಕ್ಕೆ ತರಲು ಹೊರಟಿರುವ ಅವರನ್ನು ಗೆಲ್ಲಿಸಬೇಕಾದ ಜವಾಬ್ದಾರಿ ನಮ್ಮದಾಗಿದೆ. ಆದ್ದರಿಂದ ಕಾರ್ಯಕರ್ತರು ಪ್ರತಿಯೊಂದು ವಾರ್ಡ್, ಹಳ್ಳಿಗಳಿಗೆ ತೆರಳಿ ಜನರ ಮನವೊಲಿಸಬೇಕು. ಜಾತಿ ರಾಜಕಾರಣದ ಕುತಂತ್ರ, ಎದುರಾಳಿಗಳ ತಂತ್ರ, ಅಪಾಯದಲ್ಲಿರುವ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಲು ಹೋರಾಟ ನಡೆಸಬೇಕಿದೆ.
ಕಚೇರಿಯಲ್ಲಿ ಕುಳಿತು ಚುನಾವಣಾ ತಂತ್ರಗಾರಿಕೆ ರೂಪಿಸುವ ಜತೆಗೆ ಪ್ರತಿ ದಿನದ ವಿಚಾರಗಳ ಬಗ್ಗೆ ಚಿಂತನ-ಮಂಥನ ಮಾಡಬೇಕಿದೆ. ಸಿದ್ದರಾಮಯ್ಯ ನಿಮ್ಮನ್ನು ಸಂಪೂರ್ಣ ನಂಬಿ ಇಡೀ ರಾಜ್ಯದಲ್ಲಿ ಸುತ್ತಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್, ಮಾಜಿ ಸಚಿವ ವಿಜಯಶಂಕರ್, ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಯತೀಂದ್ರ, ಮಾಜಿ ಶಾಸಕ ಸತ್ಯನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಡಾ ಅಧ್ಯಕ್ಷ ಧ್ರುವಕುಮಾರ್, ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ನರಸೇಗೌಡ, ಮಂಜೇಗೌಡ, ಕೆ.ಮರೀಗೌಡ, ಮಂಜುಳಾಮಾನಸ, ನಂದಿನಿ ಇತರರಿದ್ದರು.