Advertisement
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ರವಿವಾರ (ಜು 28) ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ವೇಳೆಯಲ್ಲೇ ದಿಢೀರ್ ಮೂಗಿನಲ್ಲಿ ರಕ್ತಸ್ರಾವವಾಗಿದೆ.
ರಕ್ತ ಸ್ರಾವ ವೇಳೆ ಬಟ್ಟೆಯಿಂದ ಮೂಗನ್ನು ಎಚ್‌ಡಿಕೆ ಪದೇ ಪದೇ ಒರೆಸಿಕೊಂಡರೂ ರಕ್ತ ಸೋರುವಿಕೆ ನಿಲ್ಲಲಿಲ್ಲ. ಮತ್ತೆ ಮೂಗಿನಿಂದ ರಕ್ತಸ್ರಾವ ಹೆಚ್ಚಾಗಿದ್ದು, ಬಿಳಿ ಶರ್ಟ್ ರಕ್ತಮಯವಾಗಿದೆ.ಇದರಿಂದ ಕೆಲ ಕಾಲ ಆತಂಕ ಸೃಷ್ಟಿಸಿದ್ದು, ಕೂಡಲೇ ಕುಮಾರಸ್ವಾಮಿ ಅವರನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ಜಯನಗರದ ಅಪೋಲೋ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜಯನಗರ ಅಪೋಲೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿ ” ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಸ್ಟ್ರೋಕ್, ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಹಿನ್ನೆಲೆ ರಕ್ತ ಹೆಪ್ಪುಗಟ್ಟದಂತೆ ಮಾಡುವ ಚಿಕಿತ್ಸೆ ಪಡೆದಿರಬಹುದು. ಈ ಬಗ್ಗೆ ಸಂಪೂರ್ಣ ಪರೀಕ್ಷೆಗೊಳಪಡಿಸಿದ ನಂತರ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.