Advertisement

ಮತ್ತೆ ಕಮಲ-ತೆನೆ ಸರ್ಕಾರ?

02:10 AM Jul 12, 2019 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರನೇ ಮತ್ತೂಂದು ತಿರುವು ಎದುರಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಮಾಪ್ತ, ಸಚಿವ ಸಾ.ರಾ.ಮಹೇಶ್‌, ಗುರುವಾರ ರಾತ್ರಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚರ್ಚಿಸಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Advertisement

ನಗರದಲ್ಲಿರುವ ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಮತ್ತು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಜತೆಗೆ ಸಾ.ರಾ.ಮಹೇಶ್‌ ಚರ್ಚೆ ನಡೆಸಿದ್ದಾರೆ. ಬಿಜೆಪಿ ಬಯಸಿದರೆ ಜೆಡಿಎಸ್‌ನ ಒಂದು ಗುಂಪು ಸರ್ಕಾರ ರಚನೆಗೆ ಸಹಾಯ ಮಾಡಲಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಮುಂದುವರಿದು, ಬಿಜೆಪಿಯವರು ಉಪ ಮುಖ್ಯಮಂತ್ರಿಯಾಗಲಿ ಅಥವಾ ಬಿಜೆಪಿಯವರೇ ಮುಖ್ಯಮಂತ್ರಿಯಾಗಿ ಎಚ್.ಡಿ.ರೇವಣ್ಣ ಉಪ ಮುಖ್ಯಮಂತ್ರಿಯಾಗಲಿ, ಕುಮಾರಸ್ವಾಮಿ ಕೇಂದ್ರ ಸಚಿವರಾಗಲಿ ಎಂಬ ಪ್ರಸ್ತಾವನೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಜೆಡಿಎಸ್‌ನ ಒಂದು ಗುಂಪು ಬಿಜೆಪಿಗೆ ಬಾಹ್ಯ ಬೆಂಬಲ ನೀಡಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ.

ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ. ರೆಸಾರ್ಟ್‌ನಲ್ಲಿರುವ ಜೆಡಿಎಸ್‌ ಶಾಸಕರ ಒಂದು ತಂಡ ಸಾ.ರಾ.ಮಹೇಶ್‌ ಜತೆ ಮಾತನಾಡಿ ಇಂತಹ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಸಾ.ರಾ.ಮಹೇಶ್‌ ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದನ್ನು ಒಪ್ಪಿಕೊಂಡಿದ್ದು, ರೆಸ್ಟ್‌ ತೆಗೆದುಕೊಳ್ಳಲು ಹೋಗಿದ್ದೆ, ಅಲ್ಲಿ ಬಿಜೆಪಿ ನಾಯಕರು ಸಿಕ್ಕಿದ್ದರು ಎಂದಷ್ಟೇ ಹೇಳಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ಸಾ.ರಾ.ಮಹೇಶ್‌ ಅವರು ಸರ್ಕಾರ ರಚನೆ ಪ್ರಸ್ತಾಪ ಮಾಡಿರುವುದು ಹೌದು. ಆದರೆ, ಬಿಜೆಪಿ ನಾಯಕರು, ಬಿ.ಎಸ್‌.ಯಡಿಯೂರಪ್ಪ ಅವರು ಜೆಡಿಎಸ್‌ ಜತೆ ಸಖ್ಯಕ್ಕೆ ವಿರೋಧ ಇರುವುದರಿಂದ ಕಷ್ಟವಾಗಬಹುದು.

Advertisement

ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ 27 ಶಾಸಕರು ಬಂದರೆ ಮಾತ್ರ ಮಾತನಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ಚರ್ಚೆ ಇಲ್ಲ
ಸಾ.ರಾ.ಮಹೇಶ್‌ ಭೇಟಿ ಆಕಸ್ಮಿಕವಾಗಿದ್ದು, ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ. ಮುರಳೀಧರರಾವ್‌ ಹಾಗೂ ಈಶ್ವರಪ್ಪ ಅವರು ಕಾರ್ಯ ನಿಮಿತ್ತ ಕುಮಾರಕೃಪಾ ಅತಿಥಿಗೃಹಕ್ಕೆ ಭೇಟಿ ನೀಡಿದ್ದು ನಿಜ. ಅವರು ವಾಪಸ್ಸಾಗುವಾಗ ಸಚಿವ ಸಾ.ರಾ.ಮಹೇಶ್‌ ಎದುರಾಗಿದ್ದಾರೆ.

ಹಾಗಾಗಿ ಈಶ್ವರಪ್ಪ ಅವರು ಸಾ.ರಾ.ಮಹೇಶ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದನ್ನು ಹೊರತುಪಡಿಸಿ ಯಾವುದೇ ರೀತಿಯಲ್ಲಿ ರಾಜಕೀಯ ಚರ್ಚೆ ನಡೆಸಿಲ್ಲ ಎಂದಿದೆ. ಸಿಎಂ ಸ್ಪಷ್ಟನೆ: ಬಿಜೆಪಿ ಜತೆ ಮಾತುಕತೆ ನಡೆಸಲು ನಾನು ಯಾರಿಗೂ ಹೊಣೆಗಾರಿಕೆ ಕೊಟ್ಟಿಲ್ಲ, ಅಂತಹ ಯಾವುದೇ ಬೆಳವಣಿಗೆಯೂ ನಡೆದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸಾ.ರಾ.ಮಹೇಶ್‌ ಅವರು ಪ್ರವಾಸೋದ್ಯಮ ಸಚಿವರಿದ್ದು ಅವರು ಕುಮಾರಕೃಪ ಅತಿಥಿಗೃಹಕ್ಕೆ ಆಗ್ಗಾಗ್ಗೆ ಹೋಗುತ್ತಿರುತ್ತಾರೆ. ಆವರ ಭೇಟಿ ಬಗ್ಗೆ ಮಾಹಿತಿ ಪಡೆಯುತ್ತೇನೆ. ಜೆಡಿಎಸ್‌ ಪಕ್ಷದ ವತಿಯಿಂದ ಯಾವುದೇ ರೀತಿಯ ಪ್ರಸ್ತಾವನೆ ಬಿಜೆಪಿ ನಾಯಕರಿಗೆ ತಲುಪಿಸಿಲ್ಲ. ಈ ಸಂದರ್ಭ ದಲ್ಲಿ ಇಂತಹ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next