ಉಡುಪಿ/ಕಾಪು: ಉಪಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಳ್ಳುತ್ತದೋ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ನಾನು ಏನೂ ಹೇಳುವುದಿಲ್ಲ. ಏನಾದರೂ ಕೇಳುವುದಿದ್ದರೆ ದೇವೇಗೌಡ ಅಥವಾ ಯುಡಿಯೂರಪ್ಪ ಸಿಕ್ಕಿದರೆ ಅವರನ್ನೇ ಕೇಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಡುಪಿಯಲ್ಲಿ ಬುಧವಾರ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಗಳವಾರ ಕಾಪುವಿಗೆ ಆಗಮಿಸಿ ಕಾಪು ಸಾಯಿರಾಧಾ ರೆಸಾರ್ಟ್‌ನಲ್ಲಿ ವಾಸ್ತವ್ಯವಿರುವ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ನಾನೂ ಸಾಕಷ್ಟು ಊಹಾಪೋಹಗಳನ್ನು ಕೇಳುತ್ತಾ ಇದ್ದೇನೆ ಅಷ್ಟೇ. ಅವುಗಳಿಗೆ ಉತ್ತರಿಸುವುದಿಲ್ಲ ಎಂದರು.
ದೇವೇಗೌಡ ಅವರು ಯುಡಿಯೂ ರಪ್ಪ ಅವರ ಟೆಲಿಫೋನ್ ಮಾತುಕತೆ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಮೈತ್ರಿ ಸರಕಾರ ಬೀಳುವುದಕ್ಕೆ ಯಾರು ಕಾರಣ ಅನ್ನೋದಿಕ್ಕೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ದೇವೇಗೌಡರು ಆರೋಪ ಮಾಡಿದಷ್ಟೂ ಸಲ ನಾನು ಉತ್ತರ ಕೊಡೋದಕ್ಕೆ ಆಗುತ್ತಾ ಎಂದು ಹೇಳಿದರು.
ಯುಡಿಯೂರಪ್ಪ ಅವರದ್ದೇ ಆಡಿಯೋ ಎಂದು ಒಪ್ಪಿಕೊಂಡಿದ್ದಾರೆ. ದಿನಕ್ಕೊಂದು ಹೇಳಿಕೆ ಕೊಟ್ಟರೆ ಯಾವುದನ್ನು ನಂಬುವುದು? ಪ್ರಕರಣ ಈಗಾಗಲೇ ಸುಪ್ರೀಂ ಮೆಟ್ಟಿಲೇರಿದೆ. ನಮ್ಮ ವಕೀಲರು ವಾದ ಮಂಡಿಸಿದ್ದಾರೆ. ಅಮಿತ್ ಶಾ ಕುಮ್ಮಕ್ಕು ಬಹಿರಂಗವಾಗಿದೆ. ಗೃಹ ಸಚಿವರೇ ಹೀಗೆ ಮಾಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ , ಸಂವಿಧಾನ ಉಳಿಯುತ್ತದೋ ಎಂದು ಪ್ರಶ್ನಿಸಿದರು.
ನೋ ರಿಯಾಕ್ಷನ್ ಟು ಪೂಜಾರಿ
ಸಿದ್ದರಾಮಯ್ಯ ಕಾಂಗ್ರೆಸ್‌ನ ಶನಿ ಎಂಬ ಜನಾರ್ದನ ಪೂಜಾರಿ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ “ನೋ ರಿಯಾಕ್ಷನ್ ಟು ಮಿಸ್ಟರ್ ಜನಾರ್ದನ ಪೂಜಾರಿ’ ಎಂದು ಸಿದ್ದರಾಮಯ್ಯ ಹೇಳಿದರು.