Advertisement

BJP-JDS ಮೈತ್ರಿ: ವಿಧಾನಸಭಾ ಚುನಾವಣೆ ಫಲಿತಾಂಶದ ಮೇಲೆ ಲೆಕ್ಕಾಚಾರ ಹೀಗಿದೆ

06:27 PM Sep 09, 2023 | Team Udayavani |

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಭಾರಿ ಆಘಾತಕ್ಕೆ ಗುರಿಯಾಗಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿವೆ. ಕಳೆದ ವಿಧಾನಸಭಾ ಚುನಾವಣೆಯ ಮತಗಳಿಕೆಯ ಪ್ರಕಾರ  ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಳ್ಳುವ ಸಾಧ್ಯಗಳಿದ್ದರೂ, ಕಾರ್ಯಕರ್ತರ ಗಟ್ಟಿ ಬಲವಿರುವ, ಸುಮಲತಾ ಅವರು ಪ್ರತಿನಿಧಿಸುತ್ತಿರುವ ಮಂಡ್ಯ, ಹಾಸನ, ಕೋಲಾರ ಸೇರಿ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಜೆಡಿಎಸ್ ಪಾಲಿಗೆ ಯಾವ ಕ್ಷೇತ್ರಗಳು ದೊರಕಲಿವೆ, ಯಾರು ಹುರಿಯಾಳಾಗಲಿದ್ದಾರೆ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.ಎರಡೂ ಪಕ್ಷಗಳ ನಾಯಕರು ಈ ಕುರಿತು ಅವಲೋಕನ ನಡೆಸುತ್ತಿದ್ದಾರೆ.

Advertisement

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 42.88%, ಬಿಜೆಪಿ 36.00% ಮತ್ತು ಜೆಡಿಎಸ್ 13.29% ಮತಗಳನ್ನು ಪಡೆದಿತ್ತು. ಲೋಕಸಭಾ ಕ್ಷೇತ್ರವಾರು ಅದೇ ಫಲಿತಾಂಶ ಬರುವ ಸಾಧ್ಯತೆಗಳು ತೀರಾ ಕಡಿಮೆ. ಲೋಕಸಭಾ ಚುನಾವಣೆಯಲ್ಲಿ ಲೆಕ್ಕಾಚಾರಗಳು ಭಿನ್ನವಾಗಿರುತ್ತದೆ. ಒಂದು ವೇಳೆ ವಿಧಾನಸಭಾ ಚುನಾವಣೆಯಂತೆ ಮತದಾರ ಪ್ರಭುಗಳು ಮತಗಳನ್ನು ನೀಡಿದರೆ, ಮೈತ್ರಿ ಏರ್ಪಡದೇ ಇದ್ದರೆ ಬಿಜೆಪಿ 20 ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

2019 ರಲ್ಲಿ ಒಟ್ಟು 28 ಸ್ಥಾನಗಳಲ್ಲಿ ಬಿಜೆಪಿ 25 ಲೋಕಸಭಾ ಸ್ಥಾನಗಳನ್ನು ಬಾಚಿಕೊಂಡರೆ, ಮಂಡ್ಯದಲ್ಲಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದರು. ಅವರಿಗೆ ಬಿಜೆಪಿ ಬೆಂಬಲ ಸೂಚಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು.

28 ಲೋಕಸಭಾ ಕ್ಷೇತ್ರವಾರು ಲೆಕ್ಕಾಚಾರ ಹೀಗಿದೆ (ವಿಧಾನಸಭಾ ಚುನಾವಣೆ)

ಬಾಗಲಕೋಟೆ: ಕಾಂಗ್ರೆಸ್ 5, ಬಿಜೆಪಿ 3ರಲ್ಲಿ ಗೆಲುವು(8 ವಿಧಾನಸಭಾ ಕ್ಷೇತ್ರಗಳ ಪೈಕಿ)
ಬೆಂಗಳೂರು ಸೆಂಟ್ರಲ್: ಕಾಂಗ್ರೆಸ್ 5, ಬಿಜೆಪಿ 3
ಬೆಂಗಳೂರು ಉತ್ತರ: ಬಿಜೆಪಿ 5, ಕಾಂಗ್ರೆಸ್ 3
ಬೆಂಗಳೂರು ದಕ್ಷಿಣ: ಕಾಂಗ್ರೆಸ್ 4, ಬಿಜೆಪಿ 4
ಬೆಂಗಳೂರು ಗ್ರಾಮಾಂತರ: ಕಾಂಗ್ರೆಸ್ 5, ಬಿಜೆಪಿ 2 ಮತ್ತು ಜೆಡಿಎಸ್ 1
ಬೆಳಗಾವಿ: ಕಾಂಗ್ರೆಸ್ 5, ಬಿಜೆಪಿ 3
ಬಳ್ಳಾರಿ: ಕಾಂಗ್ರೆಸ್ 6, ಬಿಜೆಪಿ 1, ಜೆಡಿಎಸ್ 1
ಬೀದರ್: ಬಿಜೆಪಿ 5, ಕಾಂಗ್ರೆಸ್ 3
ಬಿಜಾಪುರ: ಕಾಂಗ್ರೆಸ್ 6, ಬಿಜೆಪಿ 1, ಜೆಡಿಎಸ್ 1
ಚಾಮರಾಜನಗರ: ಕಾಂಗ್ರೆಸ್ 7, ಜೆಡಿಎಸ್ 1
ಚಿಕ್ಕಬಳ್ಳಾಪುರ: ಕಾಂಗ್ರೆಸ್‌ 5, ಬಿಜೆಪಿ 2 ಹಾಗೂ ಜೆಡಿಎಸ್‌ 1
ಚಿಕ್ಕೋಡಿ: ಕಾಂಗ್ರೆಸ್ 5, ಬಿಜೆಪಿ 3
ಚಿತ್ರದುರ್ಗ: ಕಾಂಗ್ರೆಸ್ 7, ಬಿಜೆಪಿ 1
ದಕ್ಷಿಣ ಕನ್ನಡ: ಬಿಜೆಪಿ 6, ಕಾಂಗ್ರೆಸ್ 2
ದಾವಣಗೆರೆ: ಕಾಂಗ್ರೆಸ್ 6, ಬಿಜೆಪಿ 1, ಪಕ್ಷೇತರರು 1
ಧಾರವಾಡ: ಬಿಜೆಪಿ 4, ಕಾಂಗ್ರೆಸ್ 4
ಕಲಬುರಗಿ : ಕಾಂಗ್ರೆಸ್ 6, ಬಿಜೆಪಿ 1, ಜೆಡಿಎಸ್ 1
ಹಾಸನ: ಜೆಡಿಎಸ್ 4, ಕಾಂಗ್ರೆಸ್ 2, ಬಿಜೆಪಿ 2
ಹಾವೇರಿ: ಕಾಂಗ್ರೆಸ್ 7, ಬಿಜೆಪಿ 1
ಕೋಲಾರ: ಕಾಂಗ್ರೆಸ್ 5, ಜೆಡಿಎಸ್ 3
ಕೊಪ್ಪಳ: ಕಾಂಗ್ರೆಸ್ 6, ಬಿಜೆಪಿ 1, ಕೆಆರ್ ಪಿಪಿ 1
ಮಂಡ್ಯ: ಕಾಂಗ್ರೆಸ್ 6, ಬಿಜೆಪಿ 1, ಎಸ್‌ಕೆಪಿ 1(ಕಾಂಗ್ರೆಸ್ ಬೆಂಬಲ)
ಮೈಸೂರು-ಕೊಡಗು: ಕಾಂಗ್ರೆಸ್ 5, ಜೆಡಿಎಸ್ 2, ಬಿಜೆಪಿ 1
ರಾಯಚೂರು: ಕಾಂಗ್ರೆಸ್ 5, ಬಿಜೆಪಿ 2, ಜೆಡಿಎಸ್ 1
ಶಿವಮೊಗ್ಗ: ಬಿಜೆಪಿ 4, ಕಾಂಗ್ರೆಸ್ 3, ಜೆಡಿಎಸ್ 1
ತುಮಕೂರು: ಕಾಂಗ್ರೆಸ್ 4, ಬಿಜೆಪಿ 2, ಜೆಡಿಎಸ್ 2
ಉಡುಪಿ ಚಿಕ್ಕಮಗಳೂರು: ಬಿಜೆಪಿ 4, ಕಾಂಗ್ರೆಸ್ 4
ಉತ್ತರ ಕನ್ನಡ: ಕಾಂಗ್ರೆಸ್ 5, ಬಿಜೆಪಿ 3

Advertisement

ಜೆಡಿಎಸ್ ಕಣ್ಣಿಟ್ಟಿರುವ ಪ್ರಮುಖ ಕ್ಷೇತ್ರಗಳು

ಕೋಲಾರ
ಕೋಲಾರದಲ್ಲಿ ಹಾಲಿ ಸಂಸದ ಬಿಜೆಪಿಯ ಮುನಿಸ್ವಾಮಿ, ಅವರು ಈಗಾಗಲೇ ಪ್ರಧಾನಿ ಮೋದಿ ಅವರಿಗಾಗಿ ಕ್ಷೇತ್ರ ಬಿಟ್ಟುಕೊಡಲು ಸಿದ್ದ ಎಂದಿದ್ದಾರೆ. ಎಸ್ ಸಿ ಮೀಸಲು ಕ್ಷೇತ್ರ ವಾಗಿರುವುದರಿಂದ ಮುನಿಸ್ವಾಮಿ ಅವರನ್ನೇ ಜೆಡಿಎಸ್ ಚಿಹ್ನೆಯಿಂದ ಕಣಕ್ಕಿಳಿಸುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಮಂಡ್ಯ
ಒಕ್ಕಲಿಗ ಪ್ರಾಬಲ್ಯದ ಜೆಡಿಎಸ್ ಗೆ ಗಟ್ಟಿಯಾಗಿ ಕಾರ್ಯಕರ್ತರ ಬಲವಿರುವ ಕ್ಷೇತ್ರ ಮಂಡ್ಯ. ಇಲ್ಲಿ ಹಾಲಿ ಸಂಸದೆ ಸುಮಲತಾ ಅವರು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವ ದ ಪರಿಣಾಮವಾಗಿ, ಕಾಂಗ್ರೆಸ್ ಅಬ್ಬರ ಮತ್ತು ಬಿಜೆಪಿ ಮತಗಳಿಕೆಯ ಪ್ರಮಾಣ ಹೆಚ್ಚಿಸಿಕೊಂಡ ಪರಿಣಾಮ ಜೆಡಿಎಸ್ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗದೆ ಭಾರಿ ಶಾಕ್ ಅನುಭವಿಸಿತ್ತು.

ಹಾಸನ
ಜೆಡಿಎಸ್ ಪ್ರತಿನಿಧಿಸುತ್ತಿದ್ದ ಏಕೈಕ ಲೋಕಸಭಾ ಕ್ಷೇತ್ರ ಹಾಸನವಾಗಿತ್ತು. ಜೆಡಿಎಸ್ ಭದ್ರ ನೆಲೆ ಹೊಂದಿದ್ದು, ಈ ಕ್ಷೇತ್ರ ಬಹುಪಾಲು ಜೆಡಿಎಸ್ ಉಳಿಸಿಕೊಳ್ಳಲಿದೆ. ಜೆಡಿಎಸ್ ಜಿದ್ದಿಗೆ ಬಿದ್ದ ಪರಿಣಾಮ ಸೋಲು ಕಂಡಿದ್ದ ಹಾಸನದ ಪ್ರೀತಂ ಗೌಡ ಸೇರಿ ಇಬ್ಬರು ಬಿಜೆಪಿ ಶಾಸಕರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಬೇಕಾಗುತ್ತದೆ.

ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರದ ಹಾಲಿ ಬಿಜೆಪಿ ಸಂಸದ ಬಚ್ಚೇಗೌಡರು ರಾಜಕೀಯ ನಿವೃತ್ತಿಯಾಗುವ ಸೂಚನೆ ನೀಡಿ ಬಿಜೆಪಿಯಿಯಿಂದ ಎರಡೂ ಕಾಲು ಹೊರಗಿಟ್ಟಿದ್ದಾರೆ. ಒಕ್ಕಲಿಗ ಮತಬ್ಯಾಂಕ್ ಹೆಚ್ಚಿರುವ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.

ತುಮಕೂರು
ಒಕ್ಕಲಿಗ ಪ್ರಾಬಲ್ಯವಿರುವ ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಅವರು ಬಿಜೆಪಿಯಿಂದ ಆಕಾಂಕ್ಷಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಬಲವನ್ನು ಹೊಂದಿದೆ. ಮೈತ್ರಿ ಏರ್ಪಟ್ಟರೆ ಕ್ಷೇತ್ರ ಕಮಲಕ್ಕೋ, ತೆನೆಗೋ ಎನ್ನುವ ಲೆಕ್ಕಾಚಾರಗಳನ್ನು ಮಾಡಲಾಗುತ್ತಿದೆ. ಹಾಲಿ ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ವಯಸ್ಸಿನ ಕಾರಣದಿಂದ ಕಣಕ್ಕಿಳಿಯುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ
ಜೆಡಿಎಸ್ ಕಾರ್ಯಕರ್ತರ ಬಲವಿರುವ, ಒಕ್ಕಲಿಗರ ನಿರ್ಣಾಯಕ ಮತಬ್ಯಾಂಕ್ ಇರುವ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಇಲ್ಲಿ ಹಾಲಿ ಸಂಸದ ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್. ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಇದೂ ಒಂದು. ಬಿಜೆಪಿ ಮತ್ತು ಜೆಡಿಎಸ್ ಸುರೇಶ್ ಅವರು ಮತ್ತೆ ಕಣಕ್ಕಿಳಿದರೆ ಅವರನ್ನು ಸೋಲಿಸುವ ಜಿದ್ದಿಗೆ ಬಿದ್ದು ಯಾವ ತ್ಯಾಗಕ್ಕೂ ಸಿದ್ಧವಾಗುವ ಸಾಧ್ಯತೆಗಳಿವೆ.

ಮೈಸೂರು-ಕೊಡಗು

ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರ ಮತಬ್ಯಾಂಕ್ ನಿರ್ಣಾಯಕವಾಗಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಿಟ್ಟು ಬೇರೆ ಅಭ್ಯರ್ಥಿಯನ್ನು ಬಿಜೆಪಿ ಪರಿಗಣಿಸುವ ಸಾಧ್ಯತೆಗಳು ವಿರಳ.8 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ 2 ಶಾಸಕರನ್ನು ಹೊಂದಿದೆ. ಬಿಜೆಪಿ ಕೇವಲ ಓರ್ವ ಶಾಸಕರನ್ನು ಹೊಂದಿದೆ. ಇಲ್ಲಿ ಕಾಂಗ್ರೆಸ್ ನಿಂದ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಹೈವೋಲ್ಟೇಜ್ ಕ್ಷೇತ್ರವಾಗುವ ಎಲ್ಲಾ ಲಕ್ಷಣಗಳಿವೆ. ಈ ಬಾರಿ ಬಿಜೆಪಿಗೆ ಜೆಡಿಎಸ್ ಬೆಂಬಲ ಅನಿವಾರ್ಯ ಅನ್ನುವ ಸ್ಥಿತಿ ಈ ಕ್ಷೇತ್ರದಲ್ಲೇ ನಿರ್ಮಾಣವಾಗಿರುವುದು ಕಂಡು ಬಂದಿದೆ.

ಈ ಮೇಲಿನ 7 ಕ್ಷೇತ್ರಗಳ ಪೈಕಿ 5 ಇಲ್ಲ 4 ಕ್ಷೇತ್ರಗಳನ್ನು ಬಿಜೆಪಿ, ಜೆಡಿಎಸ್ ಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ. ಉಳಿದ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಜೆಡಿಎಸ್ ಶಾಸಕರಿಗೆ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಲು ಸೂಚಿಸುವ ಸಾಧ್ಯತೆಗಳು ದಟ್ಟವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next