Advertisement

ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಸಂಬಂಧವಿಲ್ಲ

09:26 PM Sep 07, 2019 | Lakshmi GovindaRaju |

ಚಾಮರಾಜನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಸಹಕಾರ ನೀಡದ ಕಾರಣಕ್ಕಾಗಿ ಬಂಧಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ತಿಳಿಸಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಡಿ.ಕೆ. ಶಿವಕುಮಾರ್‌ ಬಂಧನವನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿ, ವಿಚಾರಣೆ ಮಾಡುತ್ತಿರುವುದು ವಿಶೇಷ ನ್ಯಾಯಾಲಯದ ಆದೇಶ ಹಾಗೂ ತೆರಿಗೆ ವಂಚನೆ ಪ್ರಕರಣದಲ್ಲಿ ಎಂಬುದನ್ನು ಪ್ರಜ್ಞಾವಂತ ಮತದಾರರು, ಸಾರ್ವಜನಿಕರು ತಿಳಿದುಕೊಂಡಿದ್ದಾರೆಂದರು.

2017 ರಲ್ಲಿ ಡಿ.ಕೆ.ಶಿವಕುಮಾರ್‌ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ, ಎಲ್ಲಾ ದಾಖಲಾತಿ ವಶಪಡಿಸಿಕೊಂಡಿದ್ದರು. ಬಂಧನವನ್ನೇ ಕಾಂಗ್ರೆಸ್‌ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರತಿಭಟನೆ ಮಾಡಿಸಲು ಮುಂದಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ನಾಯಕರು ಹೇಳುವಂತೆ 2017 ರಿಂದ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಇದಕ್ಕೂ ಮುಂಚೆ 10 ವರ್ಷ ಕಾಂಗ್ರೆಸ್‌ ಆಡಳಿತದಲ್ಲಿ ಅನೇಕ ನಾಯಕರನ್ನು ಇಡಿ ಮತ್ತು ಸಿಬಿಐ ಅಧಿಕಾರಿಗಳು ಬಂಧಿಸಿ ತನಿಖೆಗೆ ಒಳಪಡಿಸಿದ್ದರು. ಇವೆಲ್ಲವೂ ರಾಜಕಾರಣ ಕಾರಣಕ್ಕೆ ಆಗಿದ್ದವು ಎಂದು ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನೆ ಮಾಡಿದರು.

ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ಸಂವಿಧಾನದತ್ತವಾದ ಸ್ವಾಯತ್ತತೆ ಸಂಸ್ಥೆಗಳಾಗಿವೆ. ಈ ಇಲಾಖೆಗಳು ಕಾಲ ಕಾಲಕ್ಕೆ ತಮ್ಮ ವಿವೇಚನಗೆ ತಕ್ಕಂತೆ ತನಿಖೆ ನಡೆಸಿ, ತಪ್ಪಿಸ್ಥರನ್ನು ಶಿಕ್ಷಿಸುವ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವ ಕೆಲಸವನ್ನು ಬಿಜೆಪಿ ಎಂದು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದರು.

Advertisement

ಡಿ.ಕೆ.ಶಿವಕುಮಾರ್‌ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ 2 ವರ್ಷಗಳಾಗಿದೆ. ದೆಹಲಿ ಅವರ ನಿವಾಸದಲ್ಲಿ ದೊರೆತಿರುವ 8.9 ಕೋಟಿ ರೂ.ಗೆ ಲೆಕ್ಕ ಕೊಡಿ ಎಂದು ಕೇಳುತ್ತಿದೆ. ಇದಕ್ಕು ಇನ್ನು ಸಮರ್ಪಕವಾಗಿ ಉತ್ತರ ನೀಡಲು ಶಿವಕುಮಾರ್‌ ಮೀನಮೇಷ ಎಣಿಸುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಶಿವಕುಮಾರ್‌ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಹೀಗಿರುವಾಗ ರಾಜಕೀಯ ದ್ವೇಷ ಎಲ್ಲಿಂದ ಬಂತು ಎಂದು ಹೇಳಿದರು.

ರಾಮನಗರ ಹಾಗೂ ಕನಕಪುರ ಭಾಗದಲ್ಲಿ ಮಾತ್ರ ಪ್ರತಿಭಟನೆಗಳು ನಡೆದಿದೆ. ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲು ಕಾಂಗ್ರೆಸ್‌ ಮುಖಂಡರು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲಗಾಣ ಶಾಂತಮೂರ್ತಿ, ಉಪಾಧ್ಯಕ್ಷ ಅಮಚವಾಡಿ ಚಂದ್ರಶೇಖರ್‌, ಮಂಡಲದ ಅಧ್ಯಕ್ಷರಾದ ಸುಂದ್ರಪ್ಪ, ಸುಂದರರಾಜು ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next