ಕೋಲ್ಕತ್ತಾ : ಚುನಾವಣಾ ಫಲಿತಾಂಶ ಹೊರ ಬಂದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆದ ಗಲಭೆಗಳ ಕುರಿತು ಸಿಎಂ ಮಮತಾ ಬ್ಯಾನರ್ಜಿ ಮೌನ ಮುರಿದಿದ್ದಾರೆ.
ಇಂದು ಈ ವಿಚಾರವಾಗಿ ಮಾಧ್ಯಮಗಳ ಎದುರು ಮಾತನಾಡಿರುವ ಅವರು, ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಗೆಲುವು ಪಡೆದ ಕ್ಷೇತ್ರಗಳಲ್ಲಿ ಹೆಚ್ಚು ಗಲಭೆ-ಗಲಾಟೆಗಳು ನಡೆಯುತ್ತಿವೆ. ಹಳೆ ವಿಡಿಯೋಗಳ ಮೂಲಕ ಸುಳ್ಳು ಸುದ್ದಿಗಳನ್ನು ಬಿಜೆಪಿ ಪಕ್ಷ ಹರಡುತ್ತಿದೆ. ಇಂತಹ ಕೃತ್ಯವನ್ನು ನಿಲ್ಲಿಸುವಂತೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ನೀವು ಚುನಾವಣೆ ಸಂದರ್ಭದಲ್ಲಿ ಇದೇ ರೀತಿ ಸಾಕಷ್ಟು ಮಾಡಿದ್ದೀರಾ ಎಂದಿದ್ದಾರೆ.
ಘಟನೆ ಹಿನ್ನೆಲೆ : ಮೇ 2 ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಪಶ್ಚಿಮ ಬಂಗಾಳದ ಕೆಲವು ಕಡೆ ಗಲಭೆಗಳು ನಡೆದಿವೆ. ಟಿಎಂಸಿ ಕಾರ್ಯಕರ್ತರು ಎನ್ನಲಾದ ಕೆಲವರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆದಿವೆ. ಈ ಘಟನೆಯಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರ ಹತ್ಯೆ ಕೂಡ ನಡೆದಿವೆ. ಇತ್ತ ಈ ಆರೋಪವನ್ನು ತಳ್ಳಿ ಹಾಕಿರುವ ಟಿಎಂಸಿ, ಗಲಭೆಯಲ್ಲಿ ನಮ್ಮ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಬಿಜೆಪಿ ಕಾರಣ ಎಂದು ಪ್ರತ್ಯಾರೋಪ ಮಾಡಿದೆ.
ಕೋವಿಡ್ ನಿಯಮಾವಳಿ :
ಇನ್ನು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಮತಾ, ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಎಲ್ಲ ಸರ್ಕಾರಿ ಕಚೇರಿಯಲ್ಲಿ 50% ಮಾತ್ರ ಹಾಜರಾತಿ. ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಸಿನಿಮಾ ಹಾಲ್, ಬ್ಯೂಟಿ ಪಾರ್ಲರ್ ಗಳನ್ನು ಬಂದ್ ಮಾಡಲಾಗುತ್ತದೆ. ಸಾಮಾಜಿಕ ಹಾಗೂ ರಾಜಕೀಯ ಸಭೆ-ಸಮಾರಂಭಗಳ ಮೇಲೆ ನಿಷೇಧ ಹೇರಲಾಗಿದೆ ಎಂದಿದ್ದಾರೆ.