Advertisement

ಬಿಜೆಪಿ ಸಂವಿಧಾನ ವಿರೋಧಿ: ಮೇವಾನಿ

05:25 PM May 05, 2018 | |

ಚಿಕ್ಕಮಗಳೂರು: ಬಿಜೆಪಿ ಕೋಮುವಾದಿ, ಸಂವಿಧಾನ ವಿರೋಧಿ ಪಕ್ಷವಾಗಿದೆ. ಇತರ ಪಕ್ಷಗಳಿಗೂ ಬಿಜೆಪಿಗೂ ಇರುವ ದೊಡ್ಡ ವ್ಯತ್ಯಾಸ ಇದು ಎಂದು ಗುಜರಾತಿನ ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದರು.

Advertisement

ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿ ವತಿಯಿಂದ ನಗರದ ಅಂಡೆ ಛತ್ರದ ಬಳಿ ಏರ್ಪಡಿಸಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಅವರು ಮಾತನಾಡಿದರು. ನಾನು ಯಾವುದೇ ಪಕ್ಷದ ವಕ್ತಾರನಲ್ಲ. ಸಂವಿಧಾನ ಉಳಿಸುವುದನ್ನು ಮನಗಂಡು ಈ ಚುನಾವಣೆಯಲ್ಲಿ ಮತದಾನ ಮಾಡಬೇಕಿದೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ಮಹಾನ್‌ ಸುಳ್ಳುಗಾರ. ಬರೀ ಬೊಗಳೆ ಬಿಡುತ್ತಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು.

ಅವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಶೇ. 1 ರಷ್ಟು ಉದ್ಯೋಗ ಸೃಷ್ಟಿಸಿಲ್ಲ. ಮೋದಿ ಬಂದಿದ್ದಾರೆ, ಅಚ್ಛೇದಿನ್‌ ಬರಲಿವೆ ಎಂದು ದೇಶದ ಯುವಪೀಳಿಗೆ ಕಂಡಿದ್ದ ಕನಸು ನುಚ್ಚುನೂರಾಗಿದೆ ಎಂದು ಹೇಳಿದರು. 

ಮೋದಿ ಗುಜರಾತಿನವರು, ನಾನೂ ಅಲ್ಲಿನವನೇ. ಗುಜರಾತಿನಲ್ಲಿ ಅಭಿವೃದ್ಧಿ ಮಾಡಿರುವುದಾಗಿ ಅವರು ಬೊಗಳೆ ಬಿಡುತ್ತಾರೆ. ಅಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಗೊತ್ತಿದೆ. ದೇಶದಲ್ಲಿ ನಾಲ್ಕು ವರ್ಷಗಳಲ್ಲಿ ಬ್ಯಾಂಕುಗಳಿಗೆ ರೂ.80 ಸಾವಿರ ಕೋಟಿ ವಂಚನೆಯಾಗಿದೆ. ಇದಕ್ಕೆ ಪ್ರಧಾನಿ ಉತ್ತರ ನೀಡಬೇಕು ಎಂದು ಹೇಳಿದರು.

Advertisement

ದೇಶದಲ್ಲಿ ಸಾಲಬಾಧೆ, ಬೆಳೆ ನಷ್ಟದಿಂದ ಬಹಳಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ಒಬ್ಬ ರೈತರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಮೋದಿ ಅವರೊಬ್ಬ ಮಹಾನ್‌ ನಾಟಕಕಾರ, ಖಳನಟ. ನಟನೆಯಲ್ಲಿ ಪ್ರಕಾಶ್‌ ರೈ, ನಾನಾ ಪಟೇಕರ್‌, ಅಮಿತಾಬ್‌ ಬಚ್ಚನ್‌ ಅವರನ್ನೂ ಮೀರಿಸುತ್ತಾರೆ ಎಂದು ಕುಟುಕಿದರು.

ಬಿಜೆಪಿಯವರು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಹೇಳುತ್ತಾರೆ. ಆದರೆ, ಯಾರ ವಿಕಾಸ ಆಗಿದೆ ಎಂಬುದು ಗೋಚರಿಸುತ್ತಿಲ್ಲ. ಕರ್ನಾಟಕದ ಈ ಚುನಾವಣೆಯಿಂದ ಬಿಜೆಪಿಯ ಪತನ ಆರಂಭವಾಗಲಿದೆ. ಮುಂದೆ ನಡೆಯಲಿರುವ ರಾಜಸ್ತಾನ, ಮಧ್ಯಪ್ರದೇಶ ಚುನಾವಣೆಗಳಲ್ಲೂಅದು ಮುಂದುವರಿಯಲಿದೆ. ಮೋದಿ ಅವರು ರಾಮಮಂದಿರ ಹೊತ್ತು, ಹಿಮಾಲಯಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಭವಿಷ್ಯ ನುಡಿದರು.

ಇಲ್ಲಿ ಮಾತನಾಡುವುದಕ್ಕೂ ನಮಗೆ ನಿರ್ಬಂಧ ಹೇರಲು ಬಿಜೆಪಿಯವರು ಯತ್ನಿಸಿದರು. ಮಾತನಾಡುವುದಕ್ಕೆ ನಿರ್ಬಂಧ ವಿಧಿಸಲು ಮುಂದಾಗುತ್ತಾರೆ ಎಂದರೆ, ಅಂಥವರಿಂದ ಅಚ್ಛೆ ದಿನ್‌ ನಿರೀಕ್ಷಿಸುವುದು ಹೇಗೆ? ನಮ್ಮ ಭಾಷಣಕ್ಕೆ ಭಯಪಟ್ಟರೆ ಹೇಗೆ? ಮತದಾರರು ಯೋಚಿಸಿ ಹಕ್ಕನ್ನು ಚಲಾಯಿಸಬೇಕು. ಸಂವಿಧಾನ ವಿರೋಧಿಗಳನ್ನು ಬೆಂಬಲಿಸಬಾರದು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next