ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಕೇಸರಿ ಪಾಳಯದೊಳಗೆ ಮತ್ತಷ್ಟು ಅಸಮಾಧಾನ ಸ್ಫೋಟಗೊಂಡಿದೆ. ಇದೀಗ ಬಿಎಸ್ ವೈ ವಿರುದ್ಧ ಕೆಲವು ಬಿಜೆಪಿ ಮುಖಂಡರು ಪತ್ರ ಸಮರ ನಡೆಸುವ ಮೂಲಕ ಅತೃಪ್ತಿ ಹೊರಹಾಕಿದ್ದಾರೆ. ಮತ್ತೊಂದೆಡೆ ಬಿಎಸ್ ವೈ ವಿರುದ್ಧ ಯಾವುದೇ ಪತ್ರ ಬಂದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ವಕ್ತಾರ ಗೋ ಮಧುಸೂದನ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಕೈಗೊಳ್ಳುತ್ತಿದ್ದು, ಇದು ಸರಿಯಾದ ಬೆಳವಣಿಗೆ ಅಲ್ಲ ಎಂಬುದಾಗಿ ಬಿಜೆಪಿ ಶಾಸಕರು ಮತ್ತು ಪರಿಷತ್ ಸದಸ್ಯರು ಸೇರಿ ಸುಮಾರು 24 ಬಿಜೆಪಿ ಮುಖಂಡರು ಪತ್ರ ಬರೆದಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.
ವರದಿ ಪ್ರಸಾರವಾದ ಬೆನ್ನಲ್ಲೇ ಬಿಜೆಪಿ ವಕ್ತಾರ ಗೋ ಮಧುಸೂದನ್ ಅವರು ಪತ್ರಿಕಾಗೋಷ್ಠಿ ನಡೆಸಿ, ಬಿಎಸ್ ವೈಗೆ ಯಾವುದೇ ಪತ್ರ ಬಂದಿಲ್ಲ. ಇದು ಮಾಧ್ಯಮಗಳಿಗಾಗಿ ಸೃಷ್ಟಿಸಿರುವ ಪತ್ರವಾಗಿದೆ. ಪತ್ರ ಕಿಡಿಗೇಡಿಗಳ ಕೆಲಸವಾಗಿದೆ ಎಂದು ಹೇಳಿದ್ದರು.
Related Articles
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜಟಾಪಟಿಯಿಂದಾಗಿ ಬಿಎಸ್ ವೈ ಮತ್ತು ಕೆಎಸ್ ಈಶ್ವರಪ್ಪ ನಡುವಿನ ಜಂಗೀಕುಸ್ತಿ ಮುಂದುವರಿದಿದ್ದರೆ, ಮುಂದುವರಿದ ಭಾಗ ಎಂಬಂತೆ ಶಾಸಕರು, ಎಂಎಲ್ ಸಿಗಳು ತಮ್ಮ ಅಸಮಾಧಾನ ಹೊರಹಾಕತೊಡಗಿರುವುದು ಬಿಜೆಪಿಗೆ ಮತ್ತಷ್ಟು ಕಗ್ಗಂಟಾಗತೊಡಗಿದೆ.
ಪತ್ರ ಬರೆದಿರುವುದು ಸತ್ಯ: ಭಾನುಪ್ರಕಾಶ್
ನಾವು ಪತ್ರ ಬರೆದಿರುವುದು ನಿಜ, ಎಲ್ಲಾ 24 ಮುಖಂಡರು ಸಹಿ ಹಾಕಿದ್ದಾರೆ. ಆದರೆ ಗೋ ಮಧುಸೂದನ್ ಅವರು ನಮ್ಮನ್ನು ಕಿಡಿಗೇಡಿಗಳು ಎಂದು ಹೇಳಿರುವುದು ಬೇಸರ ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ತಿಳಿಸಿದ್ದಾರೆ.