ಬೆಂಗಳೂರು: ಸರ್ಕಾರದ ಭವಿಷ್ಯವನ್ನು ನಿರ್ಧರಿಸುವ 15 ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಗೆಲುವು- ಸೋಲಿನ ಲೆಕ್ಕಾಚಾರದಲ್ಲಿ ತೊಡಗಿದ್ದು, 9ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಹಳೇ ಮೈಸೂರು ಭಾಗದ ಹುಣಸೂರು, ಕೆ.ಆರ್.ಪೇಟೆ, ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕ ನಾಯಕರಲ್ಲಿ ಮೂಡಿದಂತಿದೆ. ಹೊಸಕೋಟೆ, ರಾಣೆಬೆನ್ನೂರು, ಕಾಗವಾಡ, ಚಿಕ್ಕಬಳ್ಳಾಪುರದಲ್ಲಿ ತೀವ್ರ ಹಣಾಹಣಿ ನಡೆದಿದ್ದು, ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಮತಗಟ್ಟೆವಾರು ಮತದಾನ ಪ್ರಮಾಣ ಸೇರಿದಂತೆ ಇತರೆ ಅಂಶಗಳ ಆಧಾರಗಳ ಮೇಲೆ 9 ಸ್ಥಾನ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.
ಪಕ್ಷ ಹಿಂದೆ ನಡೆಸಿದ ಆಂತರಿಕ ಸಮೀಕ್ಷೆಗಳ ಪ್ರಕಾರ ಹಿನ್ನಡೆ ಉಂಟಾಗುವ ಸಾಧ್ಯತೆಯಿದ್ದ ಕ್ಷೇತ್ರಗಳಲ್ಲಿ ವಿಶೇಷ ಒತ್ತು ನೀಡಿ ಕಾರ್ಯತಂತ್ರ ಬದಲಾಯಿಸಲಾಯಿತು. ಆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಪೂರಕ ವಾತಾವರಣ ಕಂಡುಬಂದಿತ್ತು. ಕೊನೆಯ ನಾಲ್ಕು ದಿನಗಳಲ್ಲಿ ನಡೆಸಿದ ಮನೆ ಮನೆ ಪ್ರಚಾರ, ಇತರೆ ಪ್ರಯತ್ನಗಳು ಕೈ ಹಿಡಿಯುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಮುಖ್ಯವಾಗಿ ಬೆಂಗಳೂರಿನ ನಾಲ್ಕೂ ಕ್ಷೇತ್ರಗಳಲ್ಲಿ ಮತದಾನ ಕಡಿಮೆಯಾಗಿರುವುದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ನಾಯಕರಲ್ಲಿ ಮೂಡಿದಂತಿದೆ. ಕಡಿಮೆ ಮತದಾನ ಪ್ರಮಾಣವು ಪಕ್ಷದ ಅಭ್ಯರ್ಥಿಗಳಿಗೆ ವರದಾನವೋ, ವ್ಯತಿರಿಕ್ತವಾಗಿ ಪರಿಣಮಿಸುವುದೋ ಎಂಬ ಲೆಕ್ಕಾಚಾರದಲ್ಲಿ ನಾಯಕರು ನಿರತರಾಗಿದ್ದಾರೆ. ಸದ್ಯದಲ್ಲೇ ಕ್ಷೇತ್ರವಾರು ಅವಲೋಕನ ಸಭೆ ನಡೆಸಿ ಮೌಲ್ಯಮಾಪನ ನಡೆಸಿದಾಗ ಇನ್ನಷ್ಟು ನಿಖರ ಮಾಹಿತಿ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಮತದಾನೋತ್ತರ ಸಮೀಕ್ಷೆಗಳು, ಆಂತರಿಕ ಲೆಕ್ಕಾಚಾರಗಳು, ಉಪಚುನಾವಣಾ ಉಸ್ತುವಾರಿಗಳ ಮಾಹಿತಿಯನ್ನು ತಾಳೆ ಹಾಕಿದ್ದು, ಕನಿಷ್ಠ 8 ಸ್ಥಾನ ಗೆಲ್ಲಲು ಸಮಸ್ಯೆಯಿಲ್ಲ ಎಂಬ ಲೆಕ್ಕಾಚಾರಕ್ಕೆ ನಾಯಕರು ಬಂದಂತಿದೆ. ಬಿಜೆಪಿ ಸರ್ಕಾರ ಸುಭದ್ರವಾಗಲು 7 ಸ್ಥಾನ ಗೆಲ್ಲಬೇಕಿದ್ದು, ಸರ್ಕಾರ ಸುರಕ್ಷಿತವಾಗಿರಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಡಾಲರ್ ಕಾಲೋನಿಯಲ್ಲಿದ್ದುಕೊಂಡು ಪ್ರತಿ ಕ್ಷೇತ್ರಗಳಲ್ಲಿನ ಮತದಾನ ಪ್ರಮಾಣ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಅವಲೋಕಿಸಿದರು. ಮತದಾನ ಮುಗಿಯುವವರೆಗೂ ನಿರಂತರವಾಗಿ ಉಪಚುನಾವಣಾ ಉಸ್ತುವಾರಿಗಳಿಂದಲೂ ಮಾಹಿತಿ ಪಡೆದು ಚರ್ಚಿಸಿದರು.