Advertisement

BJP ಉಸ್ತುವಾರಿ ಭೇಟಿ ಮಾಡಿದ ಪ್ರತಾಪ್‌ಸಿಂಹ

10:39 PM Mar 12, 2024 | Team Udayavani |

ಬೆಂಗಳೂರು: ಟಿಕೆಟ್‌ ನಿರಾಕರಣೆ ಸಾಧ್ಯತೆ ಹಿನ್ನೆಲೆಯಲ್ಲಿ ಪಕ್ಷದ ಸೂಚನೆ ಮೇರೆಗೆ ಬೆಂಗಳೂರಿಗೆ ಆಗಮಿಸಿದ ಸಂಸದ ಪ್ರತಾಪ್‌ ಸಿಂಹ ಅವರು ಬಿಜೆಪಿ ಚುನಾವಣ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್ವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Advertisement

ಅಗರ್ವಾಲಾ ಅವರನ್ನು ಭೇಟಿಯಾಗುವಂತೆ ಪಕ್ಷದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ಹೊರಟಿದ್ದಾರೆ ಎಂಬ ಮಾಹಿತಿ ಮಂಗಳವಾರ ಬೆಳಗ್ಗೆಯೇ ಹರಡಿತ್ತು. ಆದರೆ ಅವರು ಪಕ್ಷದ ಕಚೇರಿಗಾಗಲಿ, ಅಗರ್ವಾಲಾ ಅವರ ನಿವಾಸಕ್ಕಾಗಲಿ ಸಂಜೆಯವರೆಗೂ ಭೇಟಿ ನೀಡಿರಲಿಲ್ಲ. ಹೀಗಾಗಿ ಪ್ರತಾಪ್‌ ನಡೆ ಕುತೂಹಲ ಮೂಡಿಸಿತ್ತು. ಆದರೆ ರಾತ್ರಿ ಚುನಾವಣ ಉಸ್ತುವಾರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, “ಎಕ್ಸ್‌’ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಅಗರ್ವಾಲಾ ಜತೆಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರಿಲ್ಲದೇ ನಾನು ಏನೂ ಅಲ್ಲ ಎಂದು ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ನನಗೆ ಟಿಕೆಟ್‌ ಲಭಿಸುತ್ತದೆ ಎಂಬ ವಿಶ್ವಾಸವಿದೆ. ಇಲ್ಲವಾದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಮೂರು ತಿಂಗಳ ಹಿಂದೆಯೇ ನಿರ್ಧಾರ?
ಇದೆಲ್ಲದರ ಮಧ್ಯೆ ವರಿಷ್ಠರು ಮೂರು ತಿಂಗಳು ಮುಂಚಿತವಾಗಿಯೇ ಪ್ರತಾಪ್‌ಗೆ ಈ ಬಾರಿ ಟಿಕೆಟ್‌ ಕೊಡದೇ ಇರುವ ಬಗ್ಗೆ ನಿರ್ಧರಿಸಿದ್ದರು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ. ಮಂಡ್ಯ ಸಂಸದೆ ಸುಮಲತಾ ಅವರಿಗೆ ಮೈಸೂರು ಕ್ಷೇತ್ರದಿಂದ ಕಣಕ್ಕೆ ಇಳಿಯಿರಿ ಎಂದು ವರಿಷ್ಠರು ಸೂಚನೆ ನೀಡಿದ್ದರು. ಆದರೆ ಅವರು ಮಂಡ್ಯ ಬಿಟ್ಟುಕೊಡಲು ಒಪ್ಪಿರಲಿಲ್ಲ. ಹೀಗಾಗಿ ಪ್ರತಾಪ್‌ ಟಿಕೆಟ್‌ ಕೈ ತಪ್ಪಿಸುವ ವಿಚಾರ ಕಳೆದ ಎರಡು ವಾರಗಳಿಂದ ರೂಪಿಸಿದ ವಿಚಾರವಲ್ಲ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿದೆ. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸಹಿತ 8 ಮಂದಿ ನಾಯಕರು ರಾಧಾ ಮೋಹನ್‌ ದಾಸ್‌ ಅಗರ್ವಾಲಾ ಅವರನ್ನು ಭೇಟಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next