ಧಾರವಾಡ : ಬಹುನೀರಿಕ್ಷಿತ ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸರಕಾರವು ಪರಿಸರ ಇಲಾಖೆ ಅನುಮತಿ ಕೊಡಿಸದೆ, ಆಟವಾಡುತ್ತಿದೆ. ಬಿಜೆಪಿ ಸಂಸದರು ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಿ ದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.
ನಗರದ ಮಾಡಲ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಮಹದಾಯಿ ಯೋಜನೆಗೆ ಅನುಕೂಲವಾಗುವ ಯಾವುದೇ ಕೆಲಸ ಮಾಡಿಲ್ಲ. ಯಡಿಯೂರಪ್ಪ ಸಹಿತ ಗೋವಾ ಮುಖ್ಯಮಂತ್ರಿಗಳ ಸುಳ್ಳು ಪತ್ರ ಓದುವ ಮೂಲಕ ಜನರಿಗೆ ಮೋಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮಹದಾಯಿ ಯೋಜನೆ ಜಾರಿಗೆ ಅಗತ್ಯ ನೆರವು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಡಿಸುವಲ್ಲಿ ಕೇಂದ್ರ ಸಚಿವ ಹಾಗೂ ಈ ಭಾಗದ ಸಂಸದ ಪ್ರಹ್ಲಾದ್ ಜೋಶಿ ವಿಫಲರಾಗಿದ್ದಾರೆ. ಇವರನ್ನು ಮತ್ತೆ ಆಯ್ಕೆ ಮಾಡುವ ಮೊದಲ ಈ ಕ್ಷೇತ್ರದ ಜನ ಮತ್ತೊಮ್ಮೆ ಯೋಚಿಸಬೇಕು ಎಂದರು.
ಮಹದಾಯಿ ವಿಚಾರದಲ್ಲಿ ರಾಜ್ಯದ 25 ಜನ ಸಂಸದರು ಪ್ರಧಾನಿ ಮೋದಿ, ನಡ್ಡಾ, ಶಾ ಎದುರಿಗೆ ಕತ್ತು ಅಲ್ಲಾಡಿಸಿ ಬರುತ್ತಿರುವ ಬಗ್ಗೆ ವ್ಯಂಗ್ಯವಾಡಿ, ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಡಿಸದರೆ, ತತ್ ಕ್ಷಣ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.
ಇದೇ ವೇಳಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ರಾಜ್ಯದ ತೆರಿಗೆ ಪಾಲು ವಿಚಾರದಲ್ಲಿ ಗುಜರಾತ್ ಮುಖ್ಯಮಂತ್ರಿ ಇದ್ದಾಗ ಕೇಂದ್ರಕ್ಕೆ ಏಕೆ? ತೆರಿಗೆ ಕೊಡಬೇಕು ಎಂದು ಪ್ರಶ್ನಿಸಿದ್ದರು. ಇದೀಗ ನಾವು ಪ್ರಶ್ನಿಸಿದರೆ, ದೇಶದ್ರೋಹ ಪಟ್ಟ ಕಟ್ಟುತ್ತಾರೆ. ಮೋದಿ ಅವರಿಗೆ ಎರಡು ನಾಲಿಗೆ ಇದೆಯೇ? ಎಂದು ಪ್ರಶ್ನಿಸಿದರು.
ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ಭಾಗದ ಮುಖ್ಯ ಬೇಡಿಕೆ ಮಹದಾಯಿ ಈಡೇರಿಸಲು ಕೇಂದ್ರ ಅನುಮತಿ ಕೊಟ್ಟ ತಕ್ಷಣವೇ ಪ್ರಾರಂಭಿಸಲು ಗಟ್ಟಿ ನಿರ್ಧಾರ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಶೀಘ್ರವೇ ಮಹದಾಯಿ ನೀರು ಕುಡಿಸುವುದು ಶತಸಿದ್ಧ ಎಂದು ವಾಗ್ದಾನ ಮಾಡಿದರು.
ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್.ಪಾಟೀಲ, ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ, ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕರಾದ ಬಿ.ಆ.ಯಾವಗಲ್, ಮೋಹನ ಲಿಂಬಿಕಾಯಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.