Advertisement

ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿ ಅರ್ಹತೆ ಕಳೆದುಕೊಂಡಿದೆ: ರಣದೀಪ್ ಸುರ್ಜೇವಾಲಾ

02:21 PM Dec 20, 2022 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಭ್ರಷ್ಟಾಚಾರ ಸಮುದ್ರದಲ್ಲಿ ಮುಳುಗಿರುವ ಬಿಜೆಪಿ ಸರಕಾರ ಅಧಿಕಾರದಲ್ಲಿ ಮುಂದುವರೆಯುವ ಎಲ್ಲ ಅರ್ಹತೆ ಕಳೆದುಕೊಂಡಿದೆ ಎಂದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಆರೋಪಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಈ ಸರಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದರು.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದ ಬಿಜೆಪಿಯದ್ದು ಅನೈತಿಕ ಸರಕಾರವಾಗಿದೆ. ಎರಡೂ ಕೈಯಲ್ಲಿ ಲಂಚ ತೆಗೆದುಕೊಳ್ಳುತ್ತಾ ರಾಜ್ಯದಲ್ಲಿ ಲೂಟಿ ಮಾಡುತ್ತಿದೆ. ದೇಶದ ಅತ್ಯಂತ ಭ್ರಷ್ಟ ಸರಕಾರ ಬೊಮ್ಮಾಯಿ ಸರಕಾರವಾಗಿದೆ. ಶೇ.40ರಿಂದ 50 ಪರ್ಸೆಂಟೇಜ್ ಭ್ರಷ್ಟಾಚಾರದಲ್ಲಿ ಬಿಜೆಪಿ ಮುಳುಗಿ ಹೋಗಿದೆ. ಮಠಗಳಿಗೆ ನೀಡುವ ಅನುದಾನದಲ್ಲಿಯೂ ಭ್ರಷ್ಟಾಚಾರ ನಡೆಸಿದ್ದು, ಶೇ. 5 ಪರ್ಸೆಂಟೇಜ್ ಡಿಸ್ಕೌಂಟ್ ನೀಡಿ 35 ಪರ್ಸೆಂಟೇಜ್ ಕಮಿಷನ್ ಹೊಡೆದಿದೆ.‌ ಕರ್ನಾಟಕದಲ್ಲಿ ಶೇ. 40 ಹೊರತಾಗಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ:ಸಚಿವ ಸ್ಥಾನದ ಕಗ್ಗಂಟು: ಬೊಮ್ಮಾಯಿ ಭರವಸೆಯಿಂದ ಶಾಂತರಾದ ಈಶ್ವರಪ್ಪ

ರಾಜ್ಯದಲ್ಲಿ ನೌಕರಿಗಳನ್ನು ಬಿಕರಿಗೆ ಇರಿಸಲಾಗಿದೆ. ಪಿಎಸ್ಐ ಹಗರಣ ನೇರವಾಗಿ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ಬಾಗಿಲಿಗೆ ಬಂದಿದೆ. ಡಿಜಿಪಿ ಮಟ್ಟದ ಅಧಿಕಾರಿಯೊಬ್ಬರ ಬಂಧನವಾಗಿರುವುದು ಇತಿಹಾಸದಲ್ಲಿ ಇದೇ ಮೊದಲು. ಹಿರಿಯ ಅಧಿಕಾರಿಗೆ ಮುಟ್ಟಿದೆ ಅಂದರೆ ಮೇಲಿನ ಗೃಹ ಸಚಿವರಿಗೂ ಮುಟ್ಟಿದೆ ಎಂದರ್ಥ. ಇದರ ತನಿಖೆ ಯಾರು ಮಾಡಬೇಕು. ಈ ಸರಕಾರದಿಂದ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಇದೆಲ್ಲಕ್ಕೂ ಅಂತ್ಯ ಹಾಡುವ ಸಮಯ ಬಂದಿದೆ. ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸಹ ಈ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸುತ್ತಿದೆ ಎಂದರು.

Advertisement

ಕೃಷ್ಣಾ ನೀರಿನ ಬಳಕೆ ಕುರಿತಾಗಿ ಡಿ. 30ರಂದು ವಿಜಯಪುರದಲ್ಲಿ ಹೋರಾಟ, ಮಹಾದಾಯಿ ವಿಚಾರವಾಗಿ ಹುಬ್ಬಳ್ಳಿ‌-ಧಾರವಾಡದಲ್ಲಿ ಜನೆವರಿ 2ಕ್ಕೆ ಹೋರಾಟ, ಎಸ್.ಸಿ, ಎಸ್.ಟಿ. ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಚಿತ್ರದುರ್ಗದಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ ಎಂದರು.

ಷರತ್ತು ಹಾಕಿಲ್ಲ: ಪಕ್ಷದಿಂದ ಆಯೋಜಿಸಿದ ಬಸ್ ಯಾತ್ರೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಯಾರೂ ಯಾವುದೇ ಷರತ್ತು ಹಾಕಿಲ್ಲ. ಹಾಕುವಂತೆಯೂ ಇಲ್ಲ. ಜ. 9ರ ನಂತರ ರಾಜ್ಯಾದ್ಯಂತ ಬಸ್ ಯಾತ್ರೆ ನಡೆಸುತ್ತೇವೆ. ಪಕ್ಷದ ಎಲ್ಲಾ ನಾಯಕರೂ ಇದರಲ್ಲಿ ಭಾಗಿಯಾಗುತ್ತಾರೆ. ಬಸ್ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಿದ್ದರಾಮಯ್ಯ ಷರತ್ತು ಹಾಕಿರುವ ವಿಚಾರ ನನಗೆ ಗೊತ್ತಿಲ್ಲ. ನಮ್ಮ ನಾಯಕತ್ವ ಮತ್ತು ನೀತಿಯೂ ಒಗ್ಗಟ್ಟಾಗಿದೆ. ದೆಹಲಿ ಮಾಧ್ಯಮಗಳಿಂದ ಪ್ರಭಾವಿತರಾಗಬೇಡಿ. ಇಂತಹ ಗಾಸಿಪ್ ವಿಚಾರಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ರಾಜ್ಯದ ಜನರ ಸೇವೆ ಮಾಡುವ, ರಾಜ್ಯದಲ್ಲಿ ಸುಧಾರಣೆ ತರಲು ಕಾಂಗ್ರೆಸ್ ಬದ್ಧವಾಗಿದೆ. ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗ ಸೇರಿ ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಅಜೆಂಡಾ ರೂಪಿಸಿದ್ದೇವೆ. ಈ ಸಂಬಂಧ ಚುನಾವಣಾ ಪ್ರಣಾಳಿಕೆ ರೂಪಿಸಿ ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಸುರ್ಜೇವಾಲಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next