ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಉಪಮುಖ್ಯಮಂತ್ರಿಯಾಗಿ ಆಯ್ಕೆ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಆರ್.ಜೆ.ಡಿ. ಮತ್ತು ಕಾಂಗ್ರೆಸ್ ಮೈತ್ರಿಕೂಟದಿಂದ ಹೊರಬಂದ ಬಳಿಕ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರಿಗೆ ಭಾರತೀಯ ಜನತಾ ಪಕ್ಷವು ಬೇಷರತ್ ಬೆಂಬಲವನ್ನು ಘೋಷಿಸಿದೆ. ಈ ಮೂಲಕ ನಿತೀಶ್ ಕುಮಾರ್ ಅವರು ಮತ್ತು ಎನ್.ಡಿ.ಎ. ಮೈತ್ರಿಕೂಟಕ್ಕೆ ಮರಳಿದಂತಾಗಿದೆ. ಬುಧವಾರ ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದ ಬೆನ್ನಲೇ ಇತ್ತ ನವದೆಹಲಿಯಲ್ಲಿ ಸಭೆ ಸೇರಿದ ಬಿಜೆಪಿ ಸಂಸದೀಯ ಮಂಡಳಿಯು ನಿತೀಶ್ ಅವರ ರಾಜೀನಾಮೆ ನಿರ್ಧಾರವನ್ನು ಸ್ವಾಗತಿಸಿತು ಮಾತ್ರವಲ್ಲದೇ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ ನಿತೀಶ್ ನಿಲುವನ್ನು ಪ್ರಧಾನಿ ಮೋದಿ ಮುಕ್ತ ಕಂಠದಿಂದ ಪ್ರಶಂಸಿದರು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಬಿಹಾರ ಬಿಜೆಪಿ ವಿರೋಧಪಕ್ಷದ ನಾಯಕ ಸುಶೀಲ್ ಕುಮಾರ್ ಮೋದಿ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ನಿತೀಶ್ ಕುಮಾರ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸುಶೀಲ್ ಮೋದಿ ಅವರು ಬಿಜೆಪಿಯು ಜೆಡಿಯುಗೆ ಬೇಷರತ್ ಬೆಂಬಲ ನೀಡಲಿರುವ ಅಂಶವನ್ನು ಮನವರಿಗೆ ಮಾಡಿಕೊಟ್ಟರು. ಮತ್ತು ಬಿಹಾರ ಎನ್‌ಡಿಎ ಮೈತ್ರಿಕೂಟದ ನಾಯಕರನ್ನಾಗಿ ನಿತೀಶ್ ಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಈ ಮೂಲಕ ಮುಂಬರುವ ದಿನಗಳಲ್ಲಿ ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಆಧಿಕಾರಕ್ಕೇರುವುದು ಖಚಿತವಾಗಿದೆ.
ಬಿಹಾರ ವಿಧಾನಸಭೆಯ ಒಟ್ಟು ಸಂಖ್ಯಾ ಬಲ 243 ಆಗಿದ್ದು, ಇದರಲ್ಲಿ ಸರಳ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. ಪ್ರಸ್ತುತ ಯಾವೊಂದು ಪಕ್ಷವೂ ಏಕಾಂಗಿಯಾಗಿ ಸರಕಾರ ರಚಿಸುವಷ್ಟು ಸಂಖ್ಯಾಬಲವನ್ನು ಹೊಂದಿಲ್ಲ.
ಲಾಲೂಪ್ರಸಾದ್ ನೆತೃತ್ವದ ಆರ್.ಜೆ.ಡಿ. 80 ಸ್ಥಾನಗಳನ್ನು ಹೊಂದಿದ್ದು ಅತೀ ದೊಡ್ಡ ಪಕ್ಷವಾಗಿದೆ, ಬಳಿಕ ಜೆಡಿಯು 71 ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿ ಬಳಿ 53 ಸ್ಥಾನಗಳಿವೆ. ಇನ್ನು ಕಾಂಗ್ರೆಸ್ ಸಂಖ್ಯಾಬಲ 27 ಆಗಿದೆ, ಇತರರು 12 ಸ್ಥಾನಗಳನ್ನು ಹೊಂದಿದ್ದಾರೆ.
ಈಗಿನ ಲೆಕ್ಕಾಚಾರದ ಪ್ರಕಾರ ಬಿಜೆಪಿ ನಿತೀಶ್‌ಗೆ ಬೆಂಬಲ ಘೋಷಿಸಿರುವುದರಿಂದ ಸ್ಥಾನಗಳ ಲೆಕ್ಕಾಚಾರ ಹೀಗಿರಲಿದೆ – JD(U) 71 + NDA 58: ಒಟ್ಟು ಸ್ಥಾನಗಳು 129 ಆಗಲಿದ್ದು ಸರಳ ಬಹುಮತಕ್ಕಿಂತ 7 ಸ್ಥಾನಗಳು ಹೆಚ್ಚಾಗಲಿವೆ.
ಎನ್‌ಡಿಎ ಮೈತ್ರಿಕೂಟದ ನೂತನ ನಾಯಕರಾಗಿ ಆಯ್ಕೆಯಾಗಿರುವ ನಿತೀಶ್ ಕುಮಾರ್ ಅವರು ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
Read This: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆ: ಮುರಿದುಬಿತ್ತು ಮಹಾಮೈತ್ರಿ: //bit.ly/2uxgWnU