Advertisement

ಪಶ್ಚಿಮ ಬಂಗಾಲದಲ್ಲೂ ಎನ್.ಆರ್.ಸಿ. ಜಾರಿ: ದೀದಿ ನಾಡಿನಲ್ಲಿ ಅಮಿತ್ ಶಾ ಘೋಷಣೆ

09:45 AM Oct 02, 2019 | Hari Prasad |

ಕೊಲ್ಕೊತ್ತಾ: ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ದಾಖಲಾತಿ (ಎನ್.ಆರ್.ಸಿ.) ಜಾರಿ ಮಾಡಿದಂತೆ ಪಶ್ಚಿಮಬಂಗಾಲದಲ್ಲೂ ಶೀಘ್ರದಲ್ಲಿ ಎನ್.ಆರ್.ಸಿ.ಯನ್ನು ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊಲ್ಕೊತ್ತಾದಲ್ಲಿ ಘೋಷಿಸಿದ್ದಾರೆ.

Advertisement

ನರೇಂದ್ರ ಮೋದಿ ನೇತೃತ್ವದ ಸರಕಾರ ಅಭೂತಪೂರ್ವ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರಿದ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಗೃಹಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಶ್ಚಿಮ ಬಂಗಾಲಕ್ಕೆ ಅಮಿತ್ ಶಾ ಅವರು ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ.

ಪಶ್ಚಿಮಬಂಗಾಲದಲ್ಲಿ ರಾಷ್ಟ್ರೀಯ ನಾಗರಿಕರ ದಾಖಲಾತಿಯನ್ನು ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಹೊರಹಾಕಲಾಗುವುದು ಎಂದು ಶಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಆದರೆ ರಾಜ್ಯದಲ್ಲಿ ಎನ್.ಆರ್.ಸಿ.ಯನ್ನು ಜಾರಿಗೊಳಿಸುವ ಮೊದಲು ಹಿಂದೂ, ಸಿಖ್, ಜೈನ್ ಮತ್ತು ಬೌದ್ಧ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂಬ ಮಾಹಿತಿಯನ್ನೂ ಸಹ ಅಮಿತ್ ಶಾ ಅವರು ಇದೇ ಸಂದರ್ಭದಲ್ಲಿ ನೀಡಿದರು.

ಕೊಲ್ಕೊತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ‘ಎನ್.ಆರ್.ಸಿ. – ಜಾಗರಣ ಅಭಿಯಾನ’ವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಲದಲ್ಲಿ ಎನ್.ಆರ್.ಸಿ. ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ, ಆದರೆ ಪ್ರತೀಯೊಬ್ಬ ಅಕ್ರಮ ವಲಸಿಗನನ್ನೂ ಈ ದೇಶದಿಂದ ಹೊರಹಾಕಲಾಗುವುದು ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತಿದ್ದೇನೆ ಎಂದು ಅಮಿತ್ ಶಾ ಅವರು ಇಂದಿನ ಸಭೆಯಲ್ಲಿ ಘೋಷಿಸಿದರು. ಈ ಹಿಂದೆ ಪಶ್ಚಿಮ ಬಂಗಾಲದಲ್ಲಿ ಎಡರಂಗ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಅಕ್ರಮ ವಲಸಿಗರ ಗಡೀಪಾರಿಗೆ ಆಗ್ರಹಿಸಿದ್ದರು ಎಂಬ ವಿಚಾರವನ್ನು ಅಮಿತ್ ಶಾ ಅವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

‘ನಾನಿವತ್ತು ನಿಮಗೆ ಭರವಸೆಯನ್ನು ನೀಡುತ್ತಿದ್ದೇನೆ, ಕೇಂದ್ರ ಸರಕಾರ ನಿಮ್ಮನ್ನು ಈ ದೇಶದಿಂದ ಹೊರ ಹಾಕುವುದಿಲ್ಲ. ಈ ರೀತಿಯ ಯಾವುದೇ ಗಾಳಿಸುದ್ದಿಗಳನ್ನು ನಂಬಬೇಡಿ’ ಎಂದು ಅಮಿತ್ ಶಾ ಅವರು ಹಿಂದೂ, ಸಿಖ್, ಜೈನ್, ಬೌದ್ಧ ಹಾಗೂ ಕ್ರಿಶ್ಚಿಯನ್ ನಿರಾಶ್ರಿತರಿಗೆ ಅಭಯ ನೀಡುವ ಮಾತುಗಳನ್ನು ಆಡಿದರು.

Advertisement

ಎನ್.ಆರ್.ಸಿ.ಯನ್ನು ಅಸ್ಸಾಂನಲ್ಲಿ ಜಾರಿಗೊಳಿಸಿದ ಬಳಿಕ ಕೇಂದ್ರ ಸರಕಾರವು ಇದನ್ನು ಪಶ್ಚಿಮಬಂಗಾಲದಲ್ಲಿರುವ ಅಕ್ರಮ ವಲಸಿಗರ ವಿರುದ್ಧ ಬಳಸಲಿದೆ ಎಂಬ ಸುದ್ದಿಗಳಿಂದ ಪಶ್ಚಿಮ ಬಂಗಾಲದ ಜನರು ಗಾಬರಿಗೊಳಗಾಗಿದ್ದಾರೆ. ಮತ್ತು ಈ ವಿಚಾರವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಹಾಗೂ ಕೇಂದ್ರ ಸರಕಾರದ ನಡುವೆ ಕೆಲವು ಸಮಯಗಳಿಂದ ತಿಕ್ಕಾಟ ನಡೆಯುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next