ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಕೋವಿಡ್ ಹಗರಣ ಕುರಿತ ನಿವೃತ್ತ ನ್ಯಾ| ಮೈಕಲ್ ಡಿ. ಕುನ್ಹಾ ಆಯೋಗದ ಮಧ್ಯಾಂತರ ವರದಿಯನ್ನು ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ವರದಿ ಮಂಡನೆಯಾಗಲಿದ್ದು, ಚರ್ಚೆಯ ಬಳಿಕ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ತನಿಖೆಗೆ ಒಪ್ಪಿಗೆ ಸೂಚಿಸಿದರೆ ಶೀಘ್ರವೇ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ.
ಒಟ್ಟು 1,722 ಪುಟಗಳ ವರದಿ ಸಲ್ಲಿಸಿದ್ದ ಆಯೋಗವು ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್, ವೈದ್ಯಕೀಯ ಶಿಕ್ಷಣ ನಿರ್ದೇ ಶನಾಲಯ, ಕಿದ್ವಾಯಿ ಆಸ್ಪತ್ರೆ, ಬಿಬಿ ಎಂಪಿಯ 4 ವಲಯಗಳ ವ್ಯಾಪ್ತಿಯಲ್ಲಿ ನಡೆದಿರುವ 7,223.58 ಕೋಟಿ ರೂ.ಗಳ ಖರೀದಿ ವ್ಯವಹಾರಗಳಿಗೆ ಸಂಬಂಧಿಸಿ ಉಲ್ಲೇಖೀಸಿತ್ತು. ಅಲ್ಲದೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಶಿಫಾರಸು ಮಾಡಿತ್ತು. ಬಿಬಿಎಂಪಿಯ ಉಳಿದ ವಲಯ ಗಳು ಹಾಗೂ 31 ಜಿಲ್ಲೆಗಳಿಗೆ ಸಂಬಂಧಿಸಿದ ಖರೀದಿ ಪ್ರಕ್ರಿಯೆಗಳ ತನಿಖಾ ವರದಿಯನ್ನು ಮುಂದಿನ ದಿನಗಳಲ್ಲಿ ಸಲ್ಲಿಸಲಾಗುವುದು ಎಂಬುದನ್ನೂ ಭಾಗಶಃ ವರದಿಯಲ್ಲಿ ಸ್ಪಷ್ಟಪಡಿಸಿತ್ತು.
ಕೋವಿಡ್-19 ನಿರ್ವಹಣೆಗಾಗಿ ಸಾಮಗ್ರಿ ಖರೀದಿಯಲ್ಲಿ ಅಕ್ರಮ ಆಗಿದೆ ಎಂಬ ಆರೋಪವಿತ್ತು. ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಡಾ| ಕೆ. ಸುಧಾಕರ್ ಅವಧಿಯಲ್ಲಿ ಈ ಖರೀದಿ ನಡೆದಿತ್ತು. 3 ತಿಂಗಳಲ್ಲಿ ವರದಿ ಕೊಡಬೇಕಿದ್ದ ಆಯೋಗ 1 ವರ್ಷವಾದರೂ ವರದಿ ಕೊಟ್ಟಿರಲಿಲ್ಲ. ಆಯೋಗದ ಮೇಲೆ ಸರಕಾರ ಒತ್ತಡ ಹೇರಿ ಮಧ್ಯಾಂತರ ವರದಿ ಪಡೆದಿದೆ. ಇದು ಪಕ್ಷದ ವಿರುದ್ಧದ ದ್ವೇಷದ ರಾಜಕಾರಣ ಎಂದು ವಿಪಕ್ಷ ಬಿಜೆಪಿ ದೂರಿತ್ತು.
ನ್ಯಾ| ಕುನ್ಹಾ ವರದಿಯಲ್ಲಿ ಉಲ್ಲೇಖವಾಗಿದ್ದ ಖರೀದಿ ವ್ಯವಹಾರದ ಅಂಕಿ-ಅಂಶ (ಕೋಟಿ ರೂ.ಗಳಲ್ಲಿ)
ಆರೋಗ್ಯ ಇಲಾಖೆ – 1,754.34
ಎನ್‌ಎಚ್‌ಎಂ – 1,406.56
ವೈದ್ಯಕೀಯ ಶಿಕ್ಷಣ ಇಲಾಖೆ- 918.34
ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ
(ವೈದ್ಯಕೀಯ ಉಪಕರಣ)- 1394.59
ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ
(ಔಷಧಿಗಳು) – 569.02
ಕಿದ್ವಾಯಿ ಆಸ್ಪತ್ರೆ – 264.37
ಬಿಬಿಎಂಪಿ ಕೇಂದ್ರ ಕಚೇರಿ – 732.41
ದಾಸರಹಳ್ಳಿ ವಲಯ – 26.26
ಪೂರ್ವ ವಲಯ – 78.09
ಮಹದೇವಪುರ ವಲಯ – 48.57
ಆರ್ ಆರ್ ನಗರ – 31.03
ಒಟ್ಟು – 7,223.58 ಕೋಟಿ ರೂ.