Advertisement

ಕೋವಿಡ್ ಸೋಂಕಿತ ಬಿಜೆಪಿ ಸರ್ಕಾರ : ಇದು ತಿನ್ನಪ್ಪ ಹಾಗೂ ನುಂಗಪ್ಪ ಸರಕಾರ

02:55 PM Oct 03, 2020 | sudhir |

ಬೆಳಗಾವಿ: ಕೊರೊನಾ ಸಂಕಷ್ಟದ ಸಮಯದಲ್ಲೂ ಭ್ರಷ್ಟಾಚಾರ ಮಾಡುತ್ತಿರುವ ಯಡಿಯೂರಪ್ಪ ನೇತೃತ್ವದ ಸರಕಾರ ಕೊರೊನಾ ಸೋಂಕಿತ ಸರಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ರಾಜ್ಯ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಶುಕ್ರವಾರ ಬೆಳಗಾವಿಯ ನೂತನ ಕಾಂಗ್ರೆಸ್‌ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ರಾಜ್ಯದ ಜನರಿಗೆ ಪರಿಹಾರ ಹಾಗೂ ನ್ಯಾಯ ಎರಡೂ ಸಿಗುತ್ತಿಲ್ಲ ಎಂದು ಆರೊಪ ಮಾಡಿದರು.

Advertisement

ಬಿಜೆಪಿ ಸರಕಾರದ ವಿರುದ್ಧ ನಾಳೆಯಿಂದ ಸಹಿ ಸಂಗ್ರಹ ಅಭಿಯಾನ ಆರಂಭವಾಗಲಿದೆ. ರಾಜ್ಯದಿಂದ ಕನಿಷ್ಠ 50 ಲಕ್ಷ ಜನರು ಸಹಿ ಮಾಡಿ ರಾಷ್ಟ್ರಪತಿಗಳಿಗೆ ಕಳಿಸಬೇಕು ಎಂದು ಶಿವಕುಮಾರ ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ರಾಜ್ಯದ ಜನರ ಉದ್ಧಾರಕ್ಕಾಗಿ ಅಧಿಕಾರಕ್ಕೆ ಬಂದಿಲ್ಲ. ರಾಜ್ಯವನ್ನು ಲೂಟಿ ಹೊಡೆಯಲು ಕುರ್ಚಿಯ ಮೇಲೆ ಕುಳಿತಿದ್ದಾರೆ ಎಂದು ನೇರ ವಾಗ್ಧಾಳಿ ನಡೆಸಿದರು.

ಯಡಿಯೂರಪ್ಪ ಅಧಿಕಾರದ ಆಸೆಗಾಗಿ ಒಬ್ಬೊಬ್ಬ ಶಾಸಕರಿಗೆ 20ರಿಂದ 30 ಕೋಟಿ ಕೊಟ್ಟಿದ್ದಾರೆ.

ಇವರು ಜನರ ಉದ್ಧಾರಕ್ಕಾಗಿ ಅಧಿಕಾರಕ್ಕೆ ಬಂದಿಲ್ಲ. ರಾಜ್ಯವನ್ನು ಲೂಟಿ ಮಾಡೋದೇ ಇವರ ಮುಖ್ಯ ಕಾಯಕ. ಇದು ತಿನ್ನಪ್ಪ ಹಾಗೂ ನುಂಗಪ್ಪ ಸರಕಾರ ಎಂದು ಟೀಕಿಸಿದರು.

Advertisement

ಯಡಿಯೂರಪ್ಪ ಮುಂದೆಯೇ ನಾನು ಅವರಿಗೆ ನೀನು ಭ್ರಷ್ಟ ಇದ್ದಿಯಾ ಎಂದು ಹೇಳಿದ್ದೇನೆ. ಬಿಜೆಪಿಯಂತಹ ಭ್ರಷ್ಟ ಪಕ್ಷ ಮತ್ತೂಂದಿಲ್ಲ. ಅಧಿಕಾರದಲ್ಲಿ ಉಳಿಯೋದಕ್ಕೆ ಇವರಿಗೆ ಯೋಗ್ಯತೆ ಇದೆಯಾ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ರಾಜ್ಯದ ಆರ್ಥಿಕ ಸ್ಥಿತಿ ಈಗ ಸಂಪೂರ್ಣ ಕತ್ತಲಲ್ಲಿ ಇದೆ. ಮುಂದೆ ಯಾವುದೇ ಸರಕಾರ ಬಂದರೂ ರಾಜ್ಯದ ಹಣಕಾಸು ಸ್ಥಿತಿ ಸುಧಾರಿಸಲು ಮೂರು ವರ್ಷಬೇಕು ಎಂದು ಹೇಳಿದರು. ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಮಾತನಾಡಿ ನಾವು ಗಾಂಧಿ ಕುಲದವರು. ಬ್ರಿಟಿಷರ ಗುಂಡಿಗೆ ಎದೆಯೊಡ್ಡಿದವರು. ಬಿಜೆಪಿಯವರ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವದಿಲ್ಲ ಎಂದು ತಿರುಗೇಟು ನೀಡಿದರು. ಕೆಟ್ಟ ಚಾಳಿಯಲ್ಲಿ ಬಿಜೆಪಿ ಸರಕಾರ ನಡೆಯುತ್ತಿದೆ.
ಮಹಿಳೆಯರು, ಯುವತಿಯರು ಹಾಗೂ ವೃದ್ಧರು ಭಯದಿಂದ ಓಡಾಡುವಂತಾಗಿದೆ. ಇನ್ನೊಂದು ಕಡೆ ಬಿಜೆಪಿ ಅಧ್ಯಕ್ಷ ಕಟೀಲು ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದಕ್ಕೆ ನನ್ನ ಧಿಕ್ಕಾರ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಎಸ್‌. ಆರ್‌ ಪಾಟೀಲ, ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮಿ ಹೆಬ್ಟಾಳಕರ, ಆಂಜಲಿ ನಿಂಬಾಳಕರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next