Advertisement

ಬಿಜೆಪಿ ಒಂದು ಹೆಜ್ಜೆ ಮುಂದು

02:36 PM Nov 10, 2021 | Team Udayavani |

ಕಲಬುರಗಿ: ಈಚೆಗೆ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಮುಗಿದು ನಿಟ್ಟುಸಿರು ಬಿಡುವಾಗಲೇ ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ದಿಢೀರ್‌ನೇ ಚುನಾವಣೆ ಎದುರಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿದೆ.

Advertisement

ಚುನಾವಣೆಗೆ ಹೆಚ್ಚಿನ ಸಮಯಾವಕಾಶ ಇರದಿರುವುದರಿಂದ ಚುನಾವಣೆ ಕಾವು ಮತ್ತಷ್ಟು ಹೆಚ್ಚಿದೆ. ತಿಂಗಳೊಳಗೆ ಅಂದರೆ ಡಿ.10ರಂದು ಚುನಾವಣೆ ನಡೆದು, ಡಿ.14ರಂದು ಮತ ಎಣಿಕೆ ನಡೆಯಲಿದೆ. ಹಾಲಿ ಸದಸ್ಯ ಬಿಜೆಪಿಯ ಬಿ.ಜಿ.ಪಾಟೀಲ ಅವಧಿ ಮುಕ್ತಾಯವಾಗುತ್ತಿದ್ದು, ಈಗಾಗಲೇ ಎರಡ್ಮೂರು ಸಭೆ ನಡೆಸಿ, ಆತ್ಮಾವಲೋಕನ ನಡೆಸಲಾಗಿದೆ. ಅಂದರೆ ಬಿಜೆಪಿ ವಿಧಾನ ಪರಿಷತ್‌ ಚುನಾವಣೆ ಸಂಬಂಧ ಈಗಾಗಲೇ ಸಿದ್ಧವಾಗಿರುವುದು ಇದರಿಂದ ಸ್ಪಷವಾಗುತ್ತದೆ.

ಕಾಂಗ್ರೆಸ್‌ ಪಕ್ಷ ವಿಧಾನ ಪರಿಷತ್‌ ಚುನಾವಣೆ ಸಂಬಂಧ ಒಂದೂ ಸಭೆ ನಡೆಸಿಲ್ಲ. ಇನ್ಮುಂದೆ ಸಭೆ ನಡೆಸಿ ಸ್ಪರ್ಧಾ ಅಭ್ಯರ್ಥಿಗಳಿಂದ ಅರ್ಜಿ ಪಡೆಯಲು ಮುಂದಾಗಿದೆ. ಜೆಡಿಎಸ್‌ ಪಕ್ಷ ಚುನಾವಣೆಗೆ ಸಿದ್ಧತೆ ಹಾಗೂ ಸಭೆಯನ್ನೂ ನಡೆಸಿಲ್ಲ. ವಿಧಾನ ಪರಿಷತ್‌ ಚುನಾವಣೆ ಘೋಷಣೆ ಆಗಿದ್ದರಿಂದ ಇನ್ಮುಂದೆ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿವೆ.

ಮತ್ತೆ ಬಿ.ಜಿ.ಪಾಟೀಲ ಕಣಕ್ಕೆ

ಹಾಲಿ ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಬಿಜೆಪಿಯಿಂದ ಮತ್ತೆ ಸ್ಪರ್ಧಿಸುವ ಸಾಧ್ಯತೆಗಳೇ ಹೆಚ್ಚಿದೆ. ಎರಡ್ಮೂರು ದಿನದೊಳಗೆ ಬಿಜೆಪಿ ಈ ಕುರಿತು ಅಧಿಕೃತವಾಗಿ ಪ್ರಕಟಿಸಲಿದೆ. ಬಿಜೆಪಿಯಿಂದ ಹಲವರು ಟಿಕೆಟ್‌ ಕೇಳಿದ್ದಾರೆ. ಸ್ಪರ್ಧಿಸುವ ಬಗ್ಗೆ ತಮ್ಮ ಅಭಿಪಾಷೆ ವ್ಯಕ್ತಪಡಿಸಿದ್ದಾರೆ. ಬಿ.ಜಿ.ಪಾಟೀಲ ಸ್ಪರ್ಧಿಸಲು ಹಿಂದೆ ಸರಿದಾಗ ಮಾತ್ರ ಹೊಸಬರಿಗೆ ಟಿಕೆಟ್‌ ಸಿಗಲು ಸಾಧ್ಯ. ಏನೇ ಆಗಲಿ ಬಿ.ಜಿ.ಪಾಟೀಲರೇ ಮತ್ತೆ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಕಳೆದ ಸಲ ಮಾಜಿ ವಿಧಾನ ಪರಿಷತ್‌ ಸದಸ್ಯ ಅಲ್ಲಮಪ್ರಭು ಪಾಟೀಲ ಸ್ಪರ್ಧಿಸಿದ್ದರು. ಆದರೆ ಇವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದರಿಂದ ಈ ಸಲ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

Advertisement

ಮತದಾರರು ಎಷ್ಟು?

ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು ಸಂಸದರು, ಓರ್ವ ರಾಜ್ಯಸಭೆ ಸದಸ್ಯ, 9 ಶಾಸಕರು, ಐವರು ವಿಧಾನ ಪರಿಷತ್‌ ಸದಸ್ಯರು, 4447 ಗ್ರಾಪಂ ಸದಸ್ಯರು ಸೇರಿದಂತೆ ನಗರಸಭೆ, ಪಪಂ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಆದರೆ 47 ಜಿಪಂ ಸದಸ್ಯರು ಹಾಗೂ 179 ತಾಪಂ ಸದಸ್ಯರ ಅವಧಿ ಮುಕ್ತಾಯ ಆಗಿದ್ದರಿಂದ ಚುನಾವಣೆ ನಡೆದು ಯಾರೂ ಆಯ್ಕೆಯಾಗದ ಹಿನ್ನೆಲೆ ಇವರು ಮತದಾನದಿಂದ ಹೊರಗೆ ಉಳಿಯುವಂತೆ ಆಗಿದೆ. ಜಿಪಂ ಹಾಗೂ ತಾಪಂ ಸದಸ್ಯರೇ ಇಲ್ಲದಿರುವಾಗ ಚುನಾವಣೆ ನಡೆಯುತ್ತಿರುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಟೀಕೆಗಳು ಕೇಳಿಬರುತ್ತಿವೆ. ಮುಂದೆ ಆಯ್ಕೆಯಾಗುವ ಸದಸ್ಯರು ಒಮ್ಮೆಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡದೇ ದೂರ ಉಳಿಯುವ ಸಾಧ್ಯತೆಗಳೇ ಹೆಚ್ಚಾಗಿ ಕಂಡು ಬರುತ್ತಿದೆ. ಒಟ್ಟಾರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ರಾಜಕೀಯ ಸಂಚಲನ ಮೂಡಿದ್ದಂತೂ ಖರೇ.

ಇದನ್ನೂ ಓದಿ:ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ‘ಪುನಿತ್’ ಎಂದು ಹೆಸರನ್ನಿಟ್ಟ ಅರಣ್ಯ ಇಲಾಖೆ

“ಕೈ’ ಟಿಕೆಟ್‌ಗೆ ಪೈಪೋಟಿ ಕಲಬುರಗಿ

ಪರಿಷತ್‌ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಗೆ ದಿಢೀರ್‌ ಮುಹೂರ್ತ ನಿಗದಿಯಾಗಿದೆಯಾದರೂ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿದೆ. ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ-ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಒಬ್ಬರೂ ಮುಂದೆ ಬರುತ್ತಿಲ್ಲ. ಆದರೆ ವಿಜಯಸಿಂಗ್‌ ಸ್ಪರ್ಧೆಗೆ ಹೈಕಮಾಂಡ್‌ ಒತ್ತಡ ಹಾಕುತ್ತಿದೆ ಎನ್ನಲಾಗಿದೆ.

ಮತ್ತೊಮ್ಮೆ ಸ್ಪರ್ಧಿಸುವ ಬಯಕೆ ಹೊಂದಿದ್ದೇವೆ. ಪಕ್ಷದ ವರಿಷ್ಠರು ಹಸಿರು ನಿಶಾನೆ ತೋರಿದರೆ ಸ್ಪರ್ಧೆಗೆ ಮುಂದಾಗಲಾಗುವುದು. ಒಟ್ಟಾರೆ ಪಕ್ಷದ ಯಾವುದೇ ತೀರ್ಮಾನಕ್ಕೆ ಬದ್ಧತೆ ಹೊಂದಿದ್ದೇವೆ. -ಬಿ.ಜಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯ (ಬಿಜೆಪಿ)

ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್‌ ಸದಸ್ಯ ಸ್ಥಾನದ ಚುನಾವಣೆ ಸಂಬಂಧ ಕಾಂಗ್ರೆಸ್‌ ವತಿಯಿಂದ ಯಾವುದೇ ಸಭೆ ನಡೆಸಿಲ್ಲ. ಸ್ಪರ್ಧಾಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ವಾರದೊಳಗೆ ಸಭೆ ನಡೆಸಿ ಸ್ಪರ್ಧಿಸುವ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. -ಜಗದೇವ ಗುತ್ತೇದಾರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಕ್ಷದ ವರಿಷ್ಠರು ಒಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಪ್ರವಾಸ ರಾಜ್ಯದ 30 ಜಿಲ್ಲೆಗಳಲ್ಲೂ ಪ್ರವಾಸ ಮಾಡಲಿದ್ದು, ಪ್ರಮುಖವಾಗಿ ಜಿಲ್ಲೆಗೊಂದು ಪಂಚಾಯತ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. -ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ರಾಜ್ಯ ವಕ್ತಾರ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next