ಮೊಳಕಾಲ್ಮೂರು: ಅಂದುಕೊಂಡಂತೆ ಪಪಂ ಅಧಿಕಾರ ಬಿಜೆಪಿ ಪಾಲಾಗಿದೆ. ಪಪಂ ಅಧಿಕಾರವನ್ನು ಬಹುವರ್ಷಗಳವರೆಗೆ ಕಾಂಗ್ರೆಸ್, ಬಿಎಸ್‌ಆರ್ ಕಾಂಗ್ರೆಸ್ ಅಧಿಕಾರ ನಡೆಸಿದ್ದು, ಈ ಬಾರಿ ಬಿಜೆಪಿ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯ 6 ನೇ ವಾರ್ಡ್‌ನ ಪಿ.ಲಕ್ಷ್ಮಣ ಅಧ್ಯಕ್ಷರಾಗಿ 3 ವಾರ್ಡ್‌ನ ಶುಭಾ ಡಿಶ್‌ರಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಪಂನ ಬಿಜೆಪಿ- 8, ಕಾಂಗ್ರೆಸ್-6 ಹಾಗೂ ಪಕ್ಷೇತರರು-2 ಒಟ್ಟು 16 ಸದಸ್ಯರಬಲ ಹೊಂದಿದೆ. ನಡೆದ ಪಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್- 6 ಸದಸ್ಯರು, ಬಿಜೆಪಿ-8, ಪಕ್ಷೇತರರು-2 ಸದಸ್ಯರು ಮತ್ತುಸಂಸದ ಎ.ನಾರಾಯಣಸ್ವಾಮಿ ಸೇರಿ ಒಟ್ಟು 17 ಮತಗಳ ಬಲ ಹೊಂದಿತ್ತು. ಪಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಬಿಜೆಪಿಯಿಂದ 6ನೇ ವಾರ್ಡ್ ನ ಪಿ.ಲಕ್ಷ್ಮಣ, ಉಪಾಧ್ಯಕ್ಷರ ಸ್ಥಾನಕ್ಕೆ 3 ನೇ ವಾರ್ಡ್‌ನ ಶುಭಾ ಡಿಶ್‌ರಾಜ್, ಪಕ್ಷೇತರರ ಒಂದನೇ ವಾರ್ಡ್‌ನ ಅಭ್ಯರ್ಥಿ ಎನ್. ಮಂಜಣ್ಣ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ 14 ನೇ ವಾರ್ಡ್‌ನ ಎಂ.ಅಬ್ದುಲ್ಲಾ, ಉಪಾಧ್ಯಕ್ಷರ ಸ್ಥಾನಕ್ಕೆ 16 ನೇ ವಾರ್ಡ್‌ನ ಚಿತ್ತಮ್ಮಶಿವಲಿಂಗ ನಾಮಪತ್ರ ಸಲ್ಲಿಸಲಾಗಿತ್ತು. ನಿಗದಿತ ಸಮಯದೊಳಗಡೆ ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ 1 ನೇ ವಾರ್ಡ್‌ನ ಪಕ್ಷೇತರ ಸದಸ್ಯ ಮಂಜಣ್ಣ ನಾಮಪತ್ರ ಹಿಂಪಡೆದಿದ್ದರಿಂದ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ, ಉಪಾಧ್ಯಕ್ಷ ಸ್ಥಾನಕ್ಕೆ ಶುಭಾ ಡಿಶ್‌ರಾಜ್, ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಎಂ.ಅಬ್ದುಲ್ಲಾ, ಉಪಾಧ್ಯಕ್ಷ ಸ್ಥಾನಕ್ಕೆ ಚಿತ್ತಮ್ಮ ಶಿವಲಿಂಗ ಚುನಾವಣಾ ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿಗಳ ಪರ ಸಂಸದ ಎ.ನಾರಾಯಣಸ್ವಾಮಿ ಮತ್ತು ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಸೇರಿ 11 ಜನ ಕೈ ಎತ್ತುವ ಮೂಲಕ ಹೆಚ್ಚಿನ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿ ಸಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಮಲ್ಲಿಕಾರ್ಜುನ ಘೋಷಿಸಿದರು.
ಬಳಿಕ ಬಿಜೆಪಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ.ಪಂ ನೂತನ ಅಧ್ಯಕ್ಷರಾದ ಪಿ.ಲಕ್ಷ್ಮಣ ಮತ್ತು ಉಪಾಧ್ಯಕ್ಷೆ ಶುಭ ಡಿಶ್‌ರಾಜ್ ಅವರನ್ನು ಅಭಿನಂದಿಸಿ ಮೆರವಣಿಗೆ ಮಾಡಲಾಯಿತು. ಸಂಸದ ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ್, ಮಂಡಲಾಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀರಾಮರೆಡ್ಡಿ, ಮುಖಂಡ ಚಂದ್ರಶೇಖರಗೌಡ, ಪ.ಪಂ ಸದಸ್ಯರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.