ಹೊನ್ನಾಳಿ: ಇಲ್ಲಿನ ಪಟ್ಟಣ ಪಂಚಾಯಿತಿ ನೂತನಅಧ್ಯಕ್ಷರಾಗಿ 14ನೇ ವಾರ್ಡ್ ಸದಸ್ಯ ಕೆ.ವಿ. ಶ್ರೀಧರ ಹಾಗೂ ಉಪಾಧ್ಯಕ್ಷೆಯಾಗಿ 7ನೇ ವಾರ್ಡ್ ಸದಸ್ಯೆ ರಂಜಿತ ಚನ್ನಪ್ಪ ಅವಿರೋಧವಾಗಿ ಆಯ್ಕೆಯಾದರು.
ಸೋಮವಾರ ಪಪಂ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಹಶೀಲ್ದಾರ್‌ತುಷಾರ್ ಬಿ. ಹೂಸೂರು ಘೋಷಿಸಿದರು. ಪಟ್ಟಣ ಪಂಚಾಯಿತಿ ಸದಸ್ಯರ ಚುನಾವಣೆ ನಡೆದು 2 ವರ್ಷಗಳಾಗಿದ್ದರೂ ಚುನಾಯಿತ ಸದಸ್ಯರುಗಳು ಅಧಿಕೃತವಾಗಿ ಅಧಿಕಾರವಿಲ್ಲದೆ ಬೇಸರಗೊಂಡಿದ್ದರು. ಇತ್ತೀಚೆಗೆ ಸರ್ಕಾರ ಸ್ಥಳೀಯಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಯನ್ನು ಪ್ರಕಟಿಸಿದ್ದರಿಂದ ಸದಸ್ಯರ ಕಾಯುವಿಕೆಗೆ ತೆರೆ ಬಿದ್ದಂತಾಗಿತ್ತು. ಪಟ್ಟಣದಲ್ಲಿ ಒಟ್ಟು 18 ವಾರ್ಡ್‌ಗಳಿದ್ದು, ಚುನಾವಣೆಯಲ್ಲಿ ಬಿಜೆಪಿಯ 10, ಕಾಂಗ್ರೆಸ್‌ನ 5 ಹಾಗೂ 3 ಪಕ್ಷೇತರರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನ ಹಿಂದುಳಿದ “ಅ’ ವರ್ಗ ಹಾಗೂ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕೆ.ವಿ. ಶ್ರೀಧರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಂಜಿತ ಚನ್ನಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಂತರ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಪಕ್ಷ ಭೇದವಿರಬೇಕು. ಚುನಾವಣೆ ಮುಗಿದು ಅಧಿಕಾರ ವಹಿಸಿಕೊಂಡ ನಂತರ ಪಕ್ಷ ಭೇದ ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಈ ಮೂಲಕ ಮತ ನೀಡಿದ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ಕಿವಿಮಾತು ಹೇಳಿದರು.
ಸಿ.ಎಂ. ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಹೊನ್ನಾಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಹಸಿರು ನಿಶಾನೆ ದೊರಕಲಿದೆ. ಜನತೆಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಗಾಗಿ 17 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದೂ ಕೂಡ ಮಂಜೂರಾಗಲಿದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಸದಸ್ಯೆ ಉಮಾರಮೇಶ್, ಸುರೇಂದ್ರ ನಾಯ್ಕ, ಬಿಜೆಪಿ ತಾಲೂಕುಅಧ್ಯಕ್ಷ ಜೆ.ಕೆ. ಸುರೇಶ್, ನ್ಯಾಮತಿ ತಾಪಂ ಅಧ್ಯಕ್ಷರವಿಕುಮಾರ್, ಉಪಾಧ್ಯಕ್ಷ ಮರಿಕನ್ನಪ್ಪ, ಹೊನ್ನಾಳಿ ತಾಪಂ ಉಪಾಧ್ಯಕ್ಷ ಕೆ.ಎಲ್. ರಂಗಪ್ಪ, ತಿಪ್ಪೇಶಪ್ಪ ಇದ್ದರು.