ಚಿತ್ರದುರ್ಗ: ಸುದೀರ್ಘ ಸಮಯದ ನಂತರ ನಗರಸಭೆಗೆ ಜನಪ್ರತಿನಿಧಿಗಳು ಆಗಮಿಸಲು ವೇದಿಕೆ ಸಿದ್ಧವಾಗಿದ್ದು, ಭಾನುವಾರ ನಡೆಯುವ ಚುನಾವಣೆ ಮೂಲಕ ನೂತನವಾಗಿ ಆಯ್ಕೆಯಾದ ಜನಪ್ರತಿನಿ ಧಿಗಳು ಪದಗ್ರಹಣ ಮಾಡಲಿದ್ದಾರೆ.
ಇದರೊಟ್ಟಿಗೆ ಐತಿಹಾಸಿಕ ಚಿತ್ರದುರ್ಗ ನಗರಸಭೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವ ಸಿಗುತ್ತಿದೆ. ಈ ನಿಟ್ಟಿನಲ್ಲಿ ಶನಿವಾರ ಶಾಸಕಜಿ.ಎಚ್. ತಿಪ್ಪಾರೆಡ್ಡಿ ಅವರ ನಿವಾಸದ ಪಕ್ಕದ ಮಿಲ್ ಆವರಣದಲ್ಲಿ ನಗರಸಭೆ ಸದಸ್ಯರ ಸಭೆ ನಡೆಯಿತು. ನಗರಸಭೆಯ ಒಟ್ಟು 35ಸದಸ್ಯರ ಪೈಕಿ ಬಿಜೆಪಿ 17, ಕಾಂಗ್ರೆಸ್ 5, ಜೆಡಿಎಸ್ 6 ಹಾಗೂ ಪಕ್ಷೇತರ 7 ಸದಸ್ಯರು ಆಯ್ಕೆಯಾಗಿದ್ದಾರೆ. ಈಗ ಅಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ-ಎ ಗೆ ಮೀಸಲು ನಿಗದಿಯಾಗಿದೆ.
ಬಿಜೆಪಿ 17 ಸ್ಥಾನಗಳನ್ನು ಗೆದ್ದು ಅಧಿಕಾರದ ಸನಿಹದಲ್ಲಿದ್ದು, ಭಾನುವಾರ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್‌ನ ನಾಲ್ವರು, ಜೆಡಿಎಸ್‌ನ ಇಬ್ಬರು ಹಾಗೂ ನಾಲ್ವರುಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.ಇದರಿಂದಾಗಿ ಬಿಜೆಪಿ ಸಂಖ್ಯಾಬಲ 27ಕ್ಕೆ ತಲುಪಿದೆ. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಸಂಸದ ಎ.ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಬುಟ್ಟಿಯಲ್ಲಿ 29 ಮತಗಳು ಸೇರಿವೆ.
ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷ ರಾಜಕೀಯ. ನಂತರ ನಗರದ ಅಭಿವೃದ್ದಿಗೆ ಎಲ್ಲರೂ ಒಂದಾಗಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೆ ಅದನ್ನು ಬಿಟ್ಟು ಒಟ್ಟಾಗಿ ಮಾದರಿ ನಗರಸಭೆನ್ನಾಗಿ ಮಾಡಲು ಶ್ರಮಿಸುವಂತೆ ಕರೆ ನೀಡಿದರು. ಚಿತ್ರದುರ್ಗ ನಗರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಇದಕ್ಕೆ ಎಲ್ಲಾ ಸದಸ್ಯರುಗಳು ಸಹಕಾರ ನೀಡಬೇಕು. ಕಟ್ಟಡಗಳು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಸದಸ್ಯರು ಮುಂದಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯರಾದ ಸರ್ದಾರ್ ಅಹಮ್ಮದ್ ಪಾಷ, ಡಿ. ಮಲ್ಲಿಕಾರ್ಜುನ್,ಫಕ್ರುದ್ದೀನ್, ವೆಂಕಟೇಶ್ ಹಾಗೂ ಪಕ್ಷೇತರ ಸದಸ್ಯರು, ಬಿಜೆಪಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.