Advertisement

ವಿದ್ಯುತ್ ಕೂಡಾ ಇಲ್ಲದ ಊರಿನಿಂದ ಬಂದ ನನಗೆ ಬಿಜೆಪಿ ಬಹಳಷ್ಟು ಕೊಟ್ಟಿದೆ: ಶೋಭಾ ಕರಂದ್ಲಾಜೆ

01:02 PM Aug 20, 2021 | Team Udayavani |

ಬೆಂಗಳೂರು: ಒಂದು ರೈತ ಕುಟುಂಬದಿಂದ, ವಿದ್ಯುತ್- ಟೆಲಿಫೋನ್ ಇಲ್ಲದ ಊರಿನಿಂದ ಬಂದ ನನಗೆ ಬಿಜಪಿ ಬಹಳಷ್ಟು ಕೊಟ್ಟಿದೆ. ವಿಧಾನ ಪರಿಷತ್ ಸದಸ್ಯೆ, ಶಾಸಕಿ, ರಾಜ್ಯದಲ್ಲಿ ಸಚಿವೆಯಾಗುವ ಅವಕಾಶ ಹಾಗೂ ಎರಡು ಬಾರಿ ಸಂಸದರನ್ನಾಗಿ ಮಾಡಿದರು. ಉಡುಪಿ ಚಿಕ್ಕಮಗಳೂರು ನನ್ನ ತವರು ಕ್ಷೇತ್ರವಲ್ಲ. ಆದರೂ ಜನ ನನ್ನ ಬೆಂಬಲಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಉನ್ನತ ಸ್ಥಾನಕ್ಕೆ ಏರಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಕೃಷಿ ಇಲಾಖೆಯ ದೊಡ್ಡ ಜವಾಬ್ದಾರಿ ನನಗೆ ವಹಿಸಿದ್ದಾರೆ ಎಂದರು.

ಇಷ್ಟು ದಿನ ಸಂಸತ್ತಿನಲ್ಲಿ ಹೊಸ ಸಚಿವರನ್ನು ಪ್ರಧಾನಿ ಲೋಕಸಭೆ ಹಾಗೂ ರಾಜ್ಯಸಭೆಗೆ ಪರಿಚಯ ಮಾಡುತ್ತಾರೆ. ಆದರೆ, ದೇಶದ ಇತಿಹಾಸದಲ್ಲಿಯೇ ಪ್ರಜಾಪ್ರಭುತ್ವದ ಅಣಕ ನಡೆಯಿತು. ಪ್ರಧಾನಿಗೆ ನಮ್ಮನ್ನು ಪರಿಚಯ ಮಾಡಿಕೊಡಲು ಅವಕಾಶ ನೀಡಲಿಲ್ಲ. ಹೀಗಾಗಿ ನಮ್ಮ ಪಕ್ಷ ನೂತನ ಸಚಿವರಿಗೆ ಜನರ ಬಳಿಯೇ ತೆರಳಿ ಸ್ವಾಗತ ಮಾಡಿಸಿ, ಜನರ ಚಪ್ಪಾಳೆ ಮೂಲಕ ಜನಾಶೀರ್ವಾದ ಯಾತ್ರೆ ಮಾಡಿದೆವು. ನಮಗೆ ಅದ್ಬುತ ಬೆಂಬಲ ದೊರೆತಿದೆ. ಜನರು ಹಾರ ಹಾಕಿ ಕುಣಿದು ಮೆರವಣಿಗೆ ಮಾಡಿದರು ಎಂದು ಜನಾಶೀರ್ವಾದ ಯಾತ್ರೆಯ ಕುರಿತು ಹೇಳಿದರು.

ಮೋದಿ ಸಂಪುಟದಲ್ಲಿ 27 ಜನ ಹಿಂದುಳಿದ ವರ್ಗದವರು, 11 ಮಂದಿ ಮಹಿಳೆಯರಿದ್ದಾರೆ. ಯುವಕರಿಗೆ ಅವಕಾಶ ನೀಡಿದ್ದಾರೆ. ದಲಿತರಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರಿಗೆ ಭಯವಾಗುತ್ತಿದೆ. ಇದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಒಂದು ದಿನವೂ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ನೆರೆ, ಬರ, ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

ಸ್ವಾವಲಂಬಿಯಾಗಬೇಕು: ಕೃಷಿ ಇಲಾಖೆ ಅತ್ಯಂತ ದೊಡ್ಡ ಇಲಾಖೆ. ಹೆಚ್ಚು ಸಮಸ್ಯೆ ಇರುವ ಇಲಾಖೆ. ಶೇ 70 ರಷ್ಟು ಜನರು ಕೃಷಿ ಮಾಡುತ್ತಾರೆ. ಅವರಲ್ಲಿ ಶೇ 80 ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು. ರೈತರು ಕೃಷಿಯಿಂದ ಲಾಭವಿಲ್ಲ ಎಂದು ಜಮೀನು ಮಾರಾಟ ಮಾಡುತ್ತಿದ್ದಾನೆ. ಕೃಷಿಕ ಕೃಷಿ ಮಾಡಬೇಕು, ಕೃಷಿಯಲ್ಲಿಯೇ ಅಭಿವೃದ್ದಿಯಾಗಬೇಕು ಎಂದು ಮೋದಿ ಆಶಯ. ಯುಪಿಎ ಅವಧಿಯಲ್ಲಿ ಕೃಷಿ ಬಜೆಟ್ 21 ಸಾವಿರ ಕೋಟಿ ಮಾತ್ರ ನೀಡಲಾಗಿತ್ತು. ಆದರೆ 2020-21 ರ ಕೇಂದ್ರದ ಬಜೆಟ್ 1.23 ಲಕ್ಷ ಕೋಟಿ ಕೃಷಿ ಗಾಗಿ ಮೀಸಲಿಡಲಾಗಿದೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಯಾಗಬೇಕು . ಹಸಿರು ಕ್ರಾಂತಿ ನಂತರ ಸ್ವಾವಲಂಬಿಯಾದೆವು. ಕೋವಿಡ್ ಸಂದರ್ಭದಲ್ಲಿಯೂ ರೈತರು ಉತ್ಪಾದನೆ ಹೆಚ್ಚಳ ಮಾಡಿದ್ದಾರೆ. 326 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ಹಂಪಲು ಉತ್ಪಾದನೆಯಾಗಿ ದಾಖಲೆಯಾಗಿದೆ. ಆಹಾರ ಪದಾರ್ಥ ಉತ್ಪಾದನೆಯಲ್ಲಿ ನಾವು ವಿಶ್ವದ 10 ರಾಷ್ಟದಲ್ಲಿ ನಾವಿರಬೇಕು ಎಂಬ ಗುರಿ ಇತ್ತು. ಈಗ 9 ನೇ ಸ್ಥಾನದಲ್ಲಿದ್ದೆವೆ ಎಂದು ಕೇಂದ್ರ ಸಚಿವೆ ಹೇಳಿದರು.

Advertisement

ಇದನ್ನೂ ಓದಿ: ದಣಿವರಿಯದ “ಅಂತರ್ಯಾಮಿ” ಪಯಣ: ನಿವೃತ್ತ ಶಿಕ್ಷಕ…ಮಹಾನ್ ಪರಿಸರ ಪ್ರೇಮಿ

ಕೃಷಿಯಿಂದ ಜಿಡಿಪಿಗೆ 12-13 ರಷ್ಟು ಇತ್ತು. ಈಗ 20-21 ರಷ್ಟು ಜಿಡಿಪಿಗೆ ಕೃಷಿ ಕೊಡುಗೆ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಯಡಿ 21 ಕೋಟಿ ರೈತರಿಗೆ ನೇರ ನಗದು ನೀಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತ ತನ್ನ ಬೆಳೆ ನಾಶವಾದ ಬಗ್ಗೆ ತಾನೆ ಫೋಟೊ ತೆಗೆದು ಆ್ಯಪ್ ಗೆ ಅಪ್ ಲೋಡ್ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಹನಿ ನೀರಾವರಿಗೆ ರಾಜ್ಯದಲ್ಲಿ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ರಾಜ್ಯಕ್ಕೆ 500 ಕೋಟಿ ರೂ. ಮೀಸಲಿಡಲಾಗಿದೆ. ಅದರಲ್ಲಿ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ತೆಂಗು ಅಭಿವೃದ್ಧಿ ಮಂಡಳಿಗೆ ಇನ್ನು ಮುಂದೆ ರೈತನೇ ಅಧ್ಯಕ್ಷ ಆಗಬೇಕೆಂದು ತೀರ್ಮಾನ ಮಾಡಲಾಗಿದೆ. ತೆಂಗಿನ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈತರ ಟ್ರ್ಯಾಕ್ಟರ್ -ಟ್ರಿಲ್ಲರ್ ಸಬ್ಸಿಡಿಯಲ್ಲಿ ಮೋಸ ನಡೆಯುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಟ್ರ್ಯಾಕ್ಟರ್- ಟ್ರಿಲ್ಲರ್ ಉತ್ಪಾದನಾ ಕಂಪನಿಗಳು ದರ ಪ್ರದರ್ಶನ ಮಾಡಬೇಕು. ಎಫ್ ಪಿಒ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸಹಾಯ ನೀಡುತ್ತದೆ. ಇದಕ್ಕಾಗಿ 1 ಲಕ್ಷ ಕೋಟಿ ರೂ. ನಿಧಿ ಮೀಸಲಿಡಲಾಗಿದೆ. ಎಣ್ಣೆ ಕಾಳಿನ ಬೆಳೆಗೆ ಹೆಚ್ಚಿನ ಪ್ರಾತಿನಿಧ್ಯ ಇಲ್ಲ. ಮಲೇಷಿಯಾ, ಇಂಡೋನೇಷಿಯದಿಂದ ಪಾಮ್ ಆಯಿಲ್ ಆಮದು ಮಾಡಿಕೊಂಡು ಕಡಲೆ, ಸೂರ್ಯಕಾಂತಿ ಎಣ್ಣೆಯಲ್ಲಿ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಮ್ಮ ವಿದೇಶಿ ವಿನಿಮಯ ವ್ಯರ್ಥವಾಗುತ್ತಿದೆ. ಅದಕ್ಕಾಗಿ ಎಣ್ಣೆಕಾಳು ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿ ಧಾನ್ಯ ಬೆಳೆಯಲು ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಅದರ ರಫ್ತಿಗೆ ಆದ್ಯತೆ ನೀಡಲಾಗುತ್ತಿದೆ. ಉತ್ತರಾಖಾಂಡ್ ರಾಜ್ಯ ಅತಿ ಹೆಚ್ಚು ಸಿರಿ ಧಾನ್ಯ ರಫ್ತು ಮಾಡುತ್ತಿದೆ. ಮಣಿಪುರ ಸಂಪೂರ್ಣ ಸಾವಯವ ರಾಜ್ಯವಾಗಿದೆ. ಅಲ್ಲಿ ಒಂದು ಕೆಜಿ ರಸಗೊಬ್ಬರ ಹೋಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸೇರಿ ಕೃಷಿ ಅಭಿವೃದ್ದಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೃಷಿ ಉತ್ಪನ್ನಗಳ ಮಾರಾಟ ಮಾಡುವಲ್ಲಿ ಕರ್ನಾಕಟ ಅತ್ಯಂತ ಹಿಂದುಳಿದಿದೆ. ಕಾಫಿ, ರಬ್ಬರ್ ಮಾತ್ರ ರಫ್ತು ಮಾಡಲಾಗುತ್ತಿದೆ. ಈಗ ಗುಲಾಬಿ, ಈರುಳ್ಳಿ ರಫ್ತು ಮಾಡಲಾಗುತ್ತಿದೆ. ಅದಕ್ಕಾಗಿ ಕೃಷಿ ಉತ್ಪನ್ನಗಳ ರಫ್ತಿಗೆ ಕೈಗಾರಿಕೆ ಇಲಾಖೆ ವತಿಯಿಂದ ವಿಶೇಷ ಘಟಕ ಸ್ಥಾಪಿಸಲು ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next