ಅಲಪ್ಪುಳ : ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತ ರಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಶಂಕಿತ ಎಲ್ಲ 12 ಆರೋಪಿಗಳನ್ನು ಗುರುತಿಸಲಾಗಿದ್ದು, ಅವರು ಕೇರಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಇದೆ ವೇಳೆ ಎಸ್‌ಡಿಪಿಐನ ಕೆ ಎಸ್ ಶಾನ್ ಹತ್ಯೆ ಪ್ರಕರಣದಲ್ಲಿ ಹಂತಕರಿಗೆ ಬೆಂಬಲ ನೀಡಿದ ಆರೋಪದಲ್ಲಿ ಮತ್ತೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ರಾಜ್ಯದ ಹೊರಗೆ ತನಿಖೆಯನ್ನು ವಿಸ್ತರಿಸಲಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ವಿಜಯ್ ಸಾಖರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶ್ರೀನಿವಾಸ್ ಮತ್ತು ಶಾನ್ ಹತ್ಯೆ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಸಾಖರೆ, ಎರಡೂ ಪ್ರಕರಣಗಳ ಸಂಚಿನ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿದೆ ಆದರೆ ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶ್ರೀನಿವಾಸ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಎಲ್ಲಾ 12 ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ್ಯಾರೂ ಈಗ ರಾಜ್ಯದಲ್ಲಿ ಇಲ್ಲ. ನಾವು ಅವರನ್ನು ಬೆನ್ನಟ್ಟುತ್ತಿದ್ದು, ಶೀಘ್ರದಲ್ಲೇ ಪೊಲೀಸ್ ಕಸ್ಟಡಿಗೆ ಬರುತ್ತಾರೆ. ಹಂತಕರು ತಲೆಮರೆಸಿಕೊಳ್ಳಲು ಬಾಹ್ಯ ಬೆಂಬಲ ಪಡೆದಿರುವುದು ಖಚಿತವಾಗಿದ್ದು, ಪೊಲೀಸರು ವಿವರಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಶ್ರೀನಿವಾಸ್ ಹತ್ಯೆಗೆ ಸಂಬಂಧಿಸಿದಂತೆ ಐವರು ಎಸ್‌ಡಿಪಿಐ ಸಹಾನುಭೂತಿ ಹೊಂದಿರುವವರನ್ನು ಇದುವರೆಗೆ ಬಂಧಿಸಲಾಗಿದ್ದು, ಶಾನ್ ಸಾವಿನ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.