ದೇವನಹಳ್ಳಿ: ರಾಜ್ಯದಲ್ಲಿ ಆಡಳಿತದಲ್ಲಿದ್ದ ಮೈತ್ರಿ ಸರ್ಕಾರ ಪತನದ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಹಲವು ಬಿಜೆಪಿ ಶಾಸಕರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮುಂಬೈ, ಪುಣೆಗೆ ಅತೃಪ್ತ ಶಾಸಕರನ್ನು ಭೇಟಿಯಾಗಲು ತೆರಳಿದರು.
ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ್, ಮುಂಬೈಗೆ ತೆರಳಿದರೆ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪುಣೆಗೆ ತೆರಳಿದರು. ಮುಂಬೈಗೆ ತೆರಳಿದ ಅಶ್ವತ್ಥ ನಾರಾಯಣ್, ವಿಮಾನ ನಿಲ್ದಾಣದಲ್ಲಿಯೇ ಶಾಸ ಸತೀಶ್ ರೆಡ್ಡಿ ಜತೆಗೆ ಚರ್ಚೆ ನಡೆಸಿದರು. ಅಲ್ಲದೆ ಅನರ್ಹತೆ ಭೀತಿಯಲ್ಲಿರುವ ಅತೃಪ್ತರಿಗೆ ಧೈರ್ಯ ತುಂಬಲಿದ್ದಾರೆ ಎಂಬ ಮಾತುಗಳು ಕೇಳಿದವು.
ಶಾಸಕ ಸತೀಶ್ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರವಷ್ಟೇ ಕುಮಾರಸ್ವಾಮಿ ಸರ್ಕಾರ ಪತನವಾಗಿದೆ. ಎಚ್‌ಡಿಕೆ ಅಪವಿತ್ರ ಮೈತ್ರಿ ಮುರಿದಿದೆ. ಹೈಕಮಾಂಡ್‌ನಿಂದ ಸೂಚನೆ ಬರಲಿದ್ದು, ಇನ್ನೆರಡು ದಿನಗಳಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದರೂ ಸಹ ವಿರೋಧ ಪಕ್ಷದಲ್ಲಿ ಕುಳಿತು ಯಡಿಯೂರಪ್ಪ 14 ತಿಂಗಳಿನಿಂದ ಹೋರಾಟ ನಡೆಸಿಕೊಂಡು ಬಂದಿದ್ದರು.
ಈಗ ಅದಕ್ಕೊಂದು ಅತ್ಯದೊರೆತಿದೆ. ಹೈಕಮಾಂಡ್ ಸೂಚನೆಗೆ ಕಾಯುತ್ತಿದ್ದೇವೆ. ಅತೃಪ್ತ ಶಾಸಕರಿಗೂ ನಮಗೂ ಸಂಬಂಧವಿಲ್ಲ. ಅವರ ಪಕ್ಷದಲ್ಲಿ ಅವರವರೇ ಕಿತ್ತಾಡಿಕೊಂಡು ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷೇತರರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಆಪರೇಶನ್ ಸಂಸ್ಕೃತಿ ಅಂತ್ಯವಾಗಲಿ: ಸ್ಪೀಕರ್ ರಮೇಶ್‌ಕುಮಾರ್, ಅತೃಪ್ತರಿಗೆ ಮುಂಬೈನಿಂದ ವಾಪಸ್ ಬರಲು ಸೂಚಿಸಿದ್ದಾರೆ. ಅಲ್ಲದೆ ವಿಪ್ ಉಲ್ಲಂಘನೆಗೆ ಉತ್ತರ ನೀಡಬೇಕಿದ್ದು, ಏನು ಉತ್ತರ ನೀಡಲಿದ್ದಾರೆ ಎಂಬುದನ್ನು ನೋಡಲಿದ್ದೇವೆ.
ಬಳಿಕ ಹಿರಿಯರು ಏನು ಕ್ರಮಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ. ಬಹುತೇಕ ಶಾಸಕರನ್ನು ಅನರ್ಹಗೊಳಿಸಲಾಗುವುದು. ಅಲ್ಲದೆ ಆಪರೇಶನ್ ಸಂಸ್ಕೃತಿ ಅಂತ್ಯವಾಗಬೇಕು. ಬಿಜೆಪಿಗೆ ಇದೇನು ಹೊಸದಲ್ಲ. ಇದು 2ನೇ ಬಾರಿ ಆಪರೇಷನ್ ಆಗಿದೆ ಎಂದು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.