ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಮೆಚ್ಚಿಸಲು ರಾಜ್ಯ ಬಿಜೆಪಿ ನಾಯಕರು ಹೋರಾಟ ನಡೆಸಿದ್ದಾರೆಯೇ ಹೊರತು ಯಾವುದೇ ಸೈದ್ದಾಂತಿಕ ನಿಲುವು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈದ್ದಾಂತಿಕ ನಿಲುವು ಜನರ ಕಷ್ಟ ನಿವಾರಿಸುವ ಕಡೆ ಇರುತ್ತದೆ. ಅದು ಬಿಜೆಪಿಯವರಿಗೆ ಇಲ್ಲ ಎಂದು ಕಿಡಿ ಕಾರಿದರು.
ರಾಮ ಮಂದಿರ, ಹಿಂದೂ ರಾಷ್ಟ್ರ ನಿರ್ಮಾಣದ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದರೆ ಅದನ್ನು ಸೈದ್ದಾಂತಿಕ ನಿಲುವು ಎನ್ನಲಾಗದು. ನೀವು ಎಷ್ಟು ಸಲ ಜೈಲಿಗೆ ಹೋಗಿದ್ದೀರಿ, ನಿಮ್ಮ ಮೇಲೆ ಎಷ್ಟು ಪ್ರಕರಣಗಳಿವೆ, ಎಷ್ಟು ಲಾಠಿ ಏಟು ತಿಂದಿದ್ದೀರಿ ಎಂದು ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಷ್ಟ್ರೀಯ ಪಕ್ಷದ ನಾಯಕರು ಪ್ರಶ್ನೆ ಮಾಡುವ ರೀತಿಯೇ ಇದು ಎಂದು ಪ್ರಶ್ನಿಸಿದರು.
ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ವಿಧೇಯಕ ಮಂಡಿಸಲಾಗುವುದು. ಮಹಾರಾಷ್ಟ್ರದಲ್ಲಿರುವ ಕಾಯ್ದೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ. ಟಿವಿಗಳಲ್ಲಿ ಜೋತಿಷ್ಯ ತೋರಿಸಬೇಡಿ ಎಂದು ಹೇಳಲಾಗದು. ಜನರಿಗೆ ಅದನ್ನು ನೋಡಬೇಡಿ ಎಂದಷ್ಟೇ ನಾವು ಹೇಳಬಹುದು ಎಂದರು.
ಎಸ್ಸಿ ಎಸ್ಟಿ ನೌಕರರ ಬಡ್ತಿ ಮೀಸಲಾತಿ ವಿಷಯ ಕುರಿತು ರಾಷ್ಟ್ರಪತಿಯೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ತರಲು ಡಿಸೆಂಬರ್ ವರೆಗೆ ಅವಕಾಶ ಇದೆ. ನವೆಂಬರ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಕಾನೂನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ನಿರ್ಮಲಾ ಸೀತಾರಾಮನ್ ಭೇಟಿ
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿ ಮಾಡಿದ ಮುಖ್ಯಮಂತ್ರಿ ರಸ್ತೆ ವಿಸ್ತರಣೆ, ಮೆಟ್ರೊ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ರಕ್ಷಣಾ ಇಲಾಖೆಗೆ ಸೇರಿದ ಜಾಗ ಬೇಕಿದೆ. ಅದಕ್ಕಾಗಿ 67 ಎಕರೆ ಜಾಗ ಗುರುತಿಸಲಾಗಿದೆ. ರಕ್ಷಣಾ ಇಲಾಖೆಯ ಜಾಗಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರ ಆನೇಕಲ್ ಬಳಿ 207 ಎಕರೆ ಜಮೀನು ನೀಡಲಿದೆ. ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಜಮೀನು ಕೊಡುವರೆಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಮೈಸೂರು ದಸರಾ ಸಂದರ್ಭದಲ್ಲಿ ಸೆಪ್ಟಂಬರ್ 21ರಿಂದ 27 ರ ವರೆಗೆ ಏರ್ ಶೋ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿರುವುದಾಗಿ ಹೇಳಿದರು.