ಹುಬ್ಬಳ್ಳಿ: ವಕ್ಫ್ ಅವಾಂತರದ ವಿರುದ್ಧ ಪ್ರತಿಭಟನೆ ಮುಂದುವರಿಸಿರುವ ಬಿಜೆಪಿ ನಾಯಕರು ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ತಂಡ ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಸಂಚರಿಸಿದರೆ, ಇನ್ನೊಂದೆಡೆ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಚರಿಸಿ ಜನರ ಅಹವಾಲು ಆಲಿಸಿತು.
ವಿಜಯೇಂದ್ರ ನೇತೃತ್ವದ ತಂಡ ಬೆಳಗ್ಗೆ ರಾಯಚೂರು ಜಿಲ್ಲೆಯ ಲಿಂಗಸಗೂರಿಗೆ ತೆರಳಿ “ನಮ್ಮ ಭೂಮಿ ನಮ್ಮ ಹಕ್ಕು’ ಆಂದೋಲದ ಬೃಹತ್ ಸಮಾವೇಶ ನಡೆಸಿತು. ಅಲ್ಲದೇ ಪಹಣಿಯಲ್ಲಿ ವಕ್ಫ್ ನಿಂದ ಸಂಕಷ್ಟಕ್ಕೊಳಾಗದ ರೈತ ನಾಗರಾಜ ಶೆಟ್ಟಿ ಮನೆಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಬಳಿಕ ಯಾದಗಿರಿ ಜಿಲ್ಲೆ ಶಹಾಪುರಕ್ಕೆ ತೆರಳಿ ಅಲ್ಲಿಯೂ ಬೃಹತ್ ಸಮಾವೇಶ ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಮಾಜಿ ಸಚಿವರಾದ ಶ್ರೀರಾಮುಲು, ಜನಾರ್ದನ ರೆಡ್ಡಿ, ಶಾಸಕರಾದ ಮಾನಪ್ಪ ವಜ್ಜಲ್, ಭೈರತಿ ಬಸವರಾಜ ಸೇರಿದಂತೆ ಇತರರು ಸಾಥ್ ನೀಡಿದರು.
ಇನ್ನೊಂದೆಡೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್‌ನಿಂದ ಸಮಸ್ಯೆಗೆ ಒಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಸಂತ್ರಸ್ತರ ಅಹವಾಲು ಆಲಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಅಭಯ ನೀಡಿತು.
ಹರಿಹರ ತಾಲೂಕಿನ ಭಾನುವಳ್ಳಿಗೆ ಭೇಟಿ ನೀಡಿ ಸಾರ್ವಜನಿಕ ರುದ್ರಭೂಮಿ ಈಗ ವಕ್ಫ್ ಆಸ್ತಿ ಆಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಅನಂತರ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದ ಸಮಸ್ಯಾತ್ಮಕ ಜಾಗಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಲಾಯಿತು. ಬಳಿಕ ಚಳ್ಳಕೆರೆ ನಗರದ ಖಬರ್‌ಸ್ಥಾನ ಹಾಗೂ ಗಾಂ ಧಿನಗರದ ಚರ್ಮದ ಮಂಡಿಗೆ ತೆರಳಿ ವಕ್ಫ್ ಬೋರ್ಡ್‌ನಿಂದ ಉದ್ಭವಿಸಿರುವ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲಾಯಿತು.
ಶಾಸಕ ಸುನಿಲ್ ಕುಮಾರ್, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ಶಾಸಕ ಎಂ. ಚಂದ್ರಪ್ಪ, ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ಮೇಲ್ಮನೆ ಸದಸ್ಯ ಕೆ.ಎಸ್. ನವೀನ್ ಮೊದಲಾದವರಿದ್ದರು.