ಬೆಂಗಳೂರು: ಸದನದ ಒಳಗೆ ಹಾಗೂ ಹೊರಗೆ ಬಿಜೆಪಿಯ ಒಳ ಬೇಗುದಿ ಇನ್ನೂ ಮುಂದುವರಿಯುತ್ತಲೇ ಇದ್ದು, ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸಿಡಿಸಿರುವ ವೀಡಿಯೋ ಬಾಂಬ್ ಆಧಾರವಾಗಿಟ್ಟುಕೊಂಡು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹಣಿಯುವುದಕ್ಕೆ ಒಂದು ಬಣ ಪ್ರಯತ್ನ ನಡೆಸುತ್ತಲೇ ಇದೆ ಎನ್ನಲಾಗಿದೆ. ಹಾಗೆಯೇ ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧವೂ ಅಸಮಾಧಾನವಿದೆ ಎನ್ನಲಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಯವರೆಗೂ ವಿಜಯೇಂದ್ರ ಅವರನ್ನು ಬದಲಾಯಿಸಬಾರದು ಎಂದು ರೇಣುಕಾಚಾರ್ಯ ನೇತೃತ್ವದಲ್ಲಿ 50 ಮಾಜಿ ಶಾಸಕರು ಸಭೆ ನಡೆಸಿದ ಬೆನ್ನಲ್ಲೇ, ಯತ್ನಾಳ್ ನೇತೃತ್ವದ ಭಿನ್ನರ ತಂಡ ಮತ್ತೆ ಚುರುಕಾಗಿದೆ. ವಕ್ಫ್ ಹೋರಾಟದ ಮುಂದುವರಿದ ಭಾಗವಾಗಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಮೂಲಕ ವಿಜಯೇಂದ್ರ ಬಣಕ್ಕೆ ತಿರುಗೇಟು ನೀಡುವ ಬಗ್ಗೆ ಈ ತಂಡ ಚಿಂತನೆ ನಡೆಸಿದೆ.
ಭಿನ್ನರ ಬಣದ ಮೂಲಗಳ ಪ್ರಕಾರ, 50 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ನಡೆಸುವ ಮೂಲಕ ರಾಜ್ಯ ಸರಕಾರಕ್ಕೆ ಸವಾಲು ಹಾಕುವುದು ಇದರ ಉದ್ದೇಶ. ಜತೆಗೆ ವಿಜಯೇಂದ್ರ ಬಣಕ್ಕೆ ಎಚ್ಚರಿಕೆಯ ಸಂದೇಶ ನೀಡಿ ಸಾಮರ್ಥ್ಯ ಪ್ರದರ್ಶನ ಮಾಡುವುದು ಪ್ರಧಾನ ಗುರಿ. ಈ ಹಿನ್ನೆಲೆಯಲ್ಲಿ ಸಂಪನ್ಮೂಲಕ ಕ್ರೋಡೀಕರಣಕ್ಕೂ ತಯಾರಿ ನಡೆದಿದೆ.
ಸಮಾವೇಶ ನಡೆಸುವ ಬಗ್ಗೆ ಭಿನ್ನರ ತಂಡ ಸ್ಪಷ್ಟತೆ ಹೊಂದಿದ್ದು, ದಿನಾಂಕದ ಬಗ್ಗೆಯಷ್ಟೇ ಗೊಂದಲ ಇದೆ. ಅರವಿಂದ ಲಿಂಬಾವಳಿ ಹಾಗೂ ರಮೇಶ್ ಜಾರಕಿಹೊಳಿ ಸಂಘಟನಾತ್ಮಕವಾದ ಎಲ್ಲ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ನಾಯಕರ ಮನವೊಲಿಸುವುದಕ್ಕೆ ಕೆಲವು ಸಂಸದರು ಯತ್ನಾಳ್ಗೆ ಬಹಿರಂಗ ನೆರವು ನೀಡಿದರೂ ಆಶ್ಚರ್ಯವಿಲ್ಲ ಎಂಬುದು ಬಿಜೆಪಿ ಮೂಲಗಳ ಅಭಿಪ್ರಾಯವಾಗಿದೆ.
ಹಿರಿಯರ ವಿಶ್ವಾಸ ಗಳಿಕೆಗೆ ವಿಜಯೇಂದ್ರ ಯತ್ನ?
ಇದೆಲ್ಲದರ ಮಧ್ಯೆ ಬಿಜೆಪಿಯ ಹಿರಿಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲೇ ಹಿರಿಯ ಶಾಸಕರಾದ ಅಭಯ್ ಪಾಟೀಲ್, ಸುನಿಲ್ ಕುಮಾರ್, ಅರವಿಂದ ಬೆಲ್ಲದ್, ಡಾ| ಅಶ್ವತ್ಥನಾರಾಯಣ ಮೊದಲಾದವರ ಜತೆ ವಿಜಯೇಂದ್ರ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದಾರೆ. ಎರಡನೇ ಬಾರಿಗೆ ಶಾಸಕರಾದ ಬಹುತೇಕರ ವಿಶ್ವಾಸವನ್ನು ವಿಜಯೇಂದ್ರ ಗಳಿಸಿದ್ದಾರೆ.